ನೋಡಿದ್ರೆ ಭಯ ಆಗುತ್ತೆ, ಇದನ್ನು ತಡೆಯೋದು ಹೇಗೆ: ಕೆತ್ತಿಕಲ್ ಗುಡ್ಡದ ಭೀಕರತೆ ಕಂಡು ದಂಗಾದ ಸಚಿವ ಗುಂಡೂರಾವ್

Update: 2024-08-02 06:24 GMT

ಮಂಗಳೂರು, ಆ.2: "ನೋಡಿದ್ರೆ ಭಯ ಆಗುತ್ತದೆ. ಇದನ್ನು ತಡೆಯೋದು ಹೇಗೆ ಎಂದು ಜಿಲ್ಲಾ ಉಸ್ತವಾರಿ ಸಚಿವ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಸಚಿವರು ಅಲ್ಲಿನ ಭೀಕರತೆ ಕಂಡು ದಂಗಾದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಮಹಾನಗರ ಪಾಲಿಕೆ, ಭೂ ವಿಜ್ಞಾನ ಇಲಾಖೆ, ಕೆಪಿಟಿಸಿಎಲ್ ಸೇರಿ ಅಲ್ಲಿದ್ದ ಅಧಿಕಾರಿಗಳನ್ನು ತರಾಟೆಗೈದ ಸಚಿವ ಗುಂಡೂರಾವ್ ಇಲ್ಲಿ ಮುಂದೆ ಅನಾಹುತ ಆಗದಂತೆ ತಕ್ಷಣ ಕ್ರಮ ವಹಿಸಿ ಎಂದು ಎಚ್ಚರಿಸಿದರು.

ಗುಡ್ಡದ ಮಣ್ಣನ್ನು ಅವ್ಯಾಹತವಾಗಿ ಅಗೆದು ಸಾಗಿಸಿರುವ ಬಗ್ಗೆ ಸ್ಥಳೀಯರು ದೂರಿದಾಗ, ಈ ಬಗ್ಗೆ ಕೇಂದ್ರದಿಂದ ಬರುವ ಉನ್ನತ ಮಟ್ಟದ ತಾಂತ್ರಿಕ ತಂಡ ನೀಡುವ ವರದಿ ಆಧಾರದಲ್ಲಿ ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಮೇಲ್ನೋಟಕ್ಕೆ ಕೆತ್ತಿಕಲ್ ನಲ್ಲಿ ಗುಡ್ಡದ ಭಯಾನಕ ಸ್ಥಿತಿ, ಹಾನಿಗೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಲೇ ಶೇ.90ರಷ್ಟು ಹಾನಿ ಆಗಿರುವುದು ಕಂಡು ಬರುತ್ತಿದೆ. ತಜ್ಞರ ತಂಡ ಅಧ್ಯಯನ ವರದಿಯನ್ನು ಆಧರಿಸಿ ಮುಂದಿನ ಕ್ರಮ ವಹಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಮೇಲ್ಭಾಗದಲ್ಲಿ ನೂರಾರು ಮನೆಗಳು ಇರುವಾಗ, ಜನವಸತಿ ಪ್ರದೇಶ ಇರುವಾಗ ಗುಡ್ಡದ ಮಣ್ಣು ಇಷ್ಟು ಅಗಾಧ ಪ್ರಮಾಣದಲ್ಲಿ, ಅವೈಜ್ಞಾನಿಕವಾಗಿ ತೆಗೆಯಲು ಏಕೆ ಬಿಡಲಾಗಿದೆ ಎಂದು ಭೂ ವಿಜ್ಞಾನ ಇಲಾಖೆಯ ಪ್ರಶ್ನಿಸಿದಾಗ, ಆ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆಗೆ ಉಪಯೋಗಿಸಿದ್ದಾರೆ ಎಂದು ಅಧಿಕಾರಿ ಉತ್ತರಿಸಿದರು.

ಅದು ಹೇಗೆ ಗುಡ್ಡ ದ ಮಣ್ಣು ರಸ್ತೆಗೆ ಬಳಸುವುದು ಎಂದು ಸಚಿವರು ಅಧಿಕಾರಿಗಳನ್ನು ಮರು ಪ್ರಶ್ನೆ ಮಾಡಿದರು.

 

ಹೆದ್ದಾರಿ ಕಾಮಗಾರಿ ಮೊದಲು ಇಲ್ಲಿ ಖಾಸಗಿಯವರು ಮಣ್ಣು ಕೊರೆದು ಸಾಗಿಸಿದ್ದಾರೆ. ಡ್ರೈನೇಜ್ ವ್ಯವಸ್ಥೆ ಮಾಡದೆ ಇಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಹಿಂದೆ ಇಲ್ಲಿ ಕುಸಿತ ಆಗಿ ಒಂದು ತಿಂಗಳು ರಸ್ತೆ ಬಂದ್ ಆಗಿತ್ತು. ತಾಂತ್ರಿಕವಾಗಿ ಮೌಲ್ಯ ಮಾಪನ ಮಾಡದೆ ಕಾಮಗಾರಿ ನಡೆಸಲಾಗುತ್ತಿದೆ. ಶಿರೂರಿನ ಅನಾಹುತ ಇಲ್ಲಿಯೂ ಘಟಿಸುವ ಭಯ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಕೆತ್ತಿ ಕಲ್ ಗುಡ್ಡದ ಮೇಲ್ಭಾಗದಲ್ಲಿ ಪಿಎಸ್ ಐ ಮತ್ತು ತಂಡವನ್ನು ನೇಮಿಸಲಾಗಿದ್ದು, ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದಿರುವ ಭೂ ಕುಸಿತ ಪ್ರಕರಣದ ಅಧ್ಯಯನಕ್ಕೆ ಬಂದಿರುವ ಐಐಟಿ ಪ್ರಾಧ್ಯಾಪಕರನ್ನು ಒಳಗೊಂಡ ತಂಡ ಈ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ, ಕೆತ್ತಿಕಲ್ ಪ್ರದೇಶದ ಅಧ್ಯಯನ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಸಚಿವರ ಜೊತೆ ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ವಿನಯ್ ರಾಜ್, ಅನಿಲ್ ಕುಮಾರ್, ಸುರೇಂದ್ರ ಕಾಂಬ್ಳಿ, ಜಿಪಂ ಸಿಇಒ ಡಾ.ಆನಂದ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಮನಪಾ ಆಯುಕ್ತ ಆನಂದ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಝ್ಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News