ಲೋಕಸಭಾ, ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ದ.ಕ. ಜಿಲ್ಲೆಯಲ್ಲಿ ಜಯಭೇರಿ: ಸಲೀಂ ಅಹ್ಮದ್ ವಿಶ್ವಾಸ

Update: 2023-08-26 13:27 GMT

ಮಂಗಳೂರು, ಆ.26: ಮುಂಬರುವ ಲೋಕಸಭಾ, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ದ.ಕ. ಜಿಲ್ಲೆಯಲ್ಲಿ ಜಯಭೇರಿ ಬಾರಿಸಲಿದ್ದು, ಪಕ್ಷಕ್ಕೆ ದೊಡ್ಡ ಶಕ್ತಿ ಸಿಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇತರೆ ಜಿಲ್ಲೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ದ.ಕ. ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕನಿಷ್ಠ 5 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದೆವು. ಆದರೆ 2 ಕ್ಷೇತ್ರ ಮಾತ್ರ ಗೆದ್ದಿದ್ದೇವೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದೆ. ದ.ಕ. ಜಿಲ್ಲೆ ಐತಿಹಾಸಿಕ ಜಿಲ್ಲೆಯಾಗಿದ್ದು, 1981ರಿಂದ ಈ ಜಿಲ್ಲೆಯ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಅವರು ತಮ್ಮ ಅವಧಿಯಲ್ಲಿ ಜಿಲ್ಲೆಗೆ ವಿಶೇಷ ಕೊಡುಗೆ ನೀಡುವ ಮೂಲಕ ಸುಭದ್ರವಾಗಿ ಪಕ್ಷ ಕಟ್ಟಿದ್ದರು. ಈಗಿನ ಸ್ಥಿತಿಯನ್ನು ನಾವೆಲ್ಲರೂ ವಿಶ್ಲೇಷಿಸಬೇಕು ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯ ನಾಯಕರು, ಕಾರ್ಯಕರ್ತರು ಕಂಕನಬದ್ಧರಾಗಿ ಕೆಲಸ ಮಾಡಿ ರಾಜ್ಯಕ್ಕೆ ಸಂದೇಶ ರವಾನಿಸಬೇಕಾಗಿದೆ. ಬ್ಲಾಕ್, ಬೂತ್, ವಾರ್ಡ್, ಪಂಚಾಯತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಹೋರಾಟ, ಕೊಡುಗೆಗಳ ಬಗ್ಗೆ ಜನರಿಗೆ ತಲುಪಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ನಡೆಸಬೇಕು. ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಮತದಾನದ ಶೇಕಡವಾರು ಹೆಚ್ಚಿಸುವ ಕುರಿತು ಚರ್ಚಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಶಾಸಕ ಅಶೋಕ್ ಕುಮಾರ್ ರೈ, ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೃಪಾ ಆಳ್ವ, ಪದ್ಮರಾಜ್, ಮುಖಂಡರಾದ ಶಶಿಧರ್ ಹೆಗ್ಡೆ, ಸದಾಶಿವ್ ಉಳ್ಳಾಲ್, ಲುಕ್ಮಾನ್ ಬಂಟ್ವಾಳ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಬಿ.ಎಂ. ಅಬ್ಬಾಸ್ ಅಲಿ, ಡಾ.ಶೇಖರ್ ಪೂಜಾರಿ, ನವೀನ್ ಡಿಸೋಜ, ಮನೋರಾಜ್ ರಾಜೀವ್, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಅಶ್ವಿನ್ ಕುಮಾರ್ ರೈ, ಹೇಮನಾಥ ಶೆಟ್ಟಿ, ವೆಂಕಪ್ಪ ಗೌಡ, ಎಂ.ಎಸ್.ಮುಹಮ್ಮದ್, ಸುದರ್ಶನ್ ಜೈನ್, ಶುಭಾಷ್ ಚಂದ್ರ ಕೊಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ಶಾಲೆಟ್ ಪಿಂಟೋ ವಂದಿಸಿದರು. ಜೋಕಿಂ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಸಭೆ ಆರಂಭಕ್ಕೂ ಮುನ್ನ ಸೇವಾದಳದ ಸಂಸ್ಥಾಪಕ ಡಾ.ನಾ.ಸು. ಹರ್ಡೀಕರ್ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News