ಯುನಿವೆಫ್ ನಿಂದ ಸ್ವಾತಂತ್ರ್ಯೋತ್ಸವ
ಮಂಗಳೂರು : ಸಮಾನತೆ, ಸಾಮರಸ್ಯ ಮತ್ತು ಸಹಬಾಳ್ವೆಗಾಗಿ ಸ್ವಾತಂತ್ರ್ಯ ಎಂಬ ಧ್ಯೇಯವಾಕ್ಯದೊಂದಿಗೆ ಯುನಿವೆಫ್ ಕರ್ನಾಟಕ ಸ್ವಾತಂತ್ರ್ಯೋತ್ಸವವನ್ನು ಫಳ್ನೀರ್ ನ ಲುಲು ಸೆಂಟರ್ ನಲ್ಲಿ ಆಚರಿಸಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯೇನೆಪೋಯ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ಅಬ್ದುಲ್ ಮಜೀದ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ಭಾರತದಂತ ಸಮ್ಮಿಶ್ರ ದೇಶದಲ್ಲಿ ಭಿನ್ನಭಿಪ್ರಾಯಗಳು ವಿರೋಧಾಭಾಸಗಳು ನಮ್ಮನ್ನು ವಿಭಜಿಸಲಿಕ್ಕಾಗಿ ಇರುವಂಥದ್ದಲ್ಲ. ವಿಭಿನ್ನ ಸಂಸ್ಕೃತಿಯ ಭಾಗವಾಗಿರುವ ಅವುಗಳನ್ನು ಒಪ್ಪಿಕೊಂಡು ಸಾಮರಸ್ಯದಿಂದ ಸಹಬಾಳ್ವೆ ನಡೆಸಿದಾಗ ಮಾತ್ರ ಇಲ್ಲಿ ಶಾಂತಿ ನೆಲೆಯೂರುತ್ತದೆ. ಇಲ್ಲಿ ಕ್ಷೋಭೆ ಸೃಷ್ಟಿಸುವ ಕೆಲವು ಜನರ ಅತಿರೇಕಗಳನ್ನು ಶಾಂತಿ ಬಯಸುವ ಹಲವು ಜನರು ಮೌನ ವಾಗಿ ಸಹಿಸುವುದೇ ಎಲ್ಲಾ ದುರಂತಗಳಿಗೆ ಮೂಲ. ವೈಯಕ್ತಿಕವಾಗಿ ಎಲ್ಲರೂ ಒಳ್ಳೆಯವರೇ ಆದರೆ ಯಾವುದೇ ದುಷ್ಪ್ರೇರಣೆಯಿಂದ ಓರ್ವ ಮಾಡುವ ಕೆಡುಕಿಗೆ ಇಡೀ ಸಮುದಾಯವೇ ಬೆಲೆ ತೆರಬೇಕಾದ ಪರಿಸ್ಥಿತಿ ಇಂದು ದೇಶದಲ್ಲಿ ನಿರ್ಮಾಣವಾಗಿದೆ. ಇಂಥ ಸ್ವಾತಂತ್ರ್ಯೋತ್ಸವಗಳು ನಮ್ಮನ್ನು ಒಗ್ಗೂಡಿಸಲಿ” ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ ಜಮೀಅತುಲ್ ಫಲಾಹ್ ಇದರ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಜನಾಬ್ ಅಶ್ಫಾಕ್ ಅಹ್ಮದ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಇನ್ನೋರ್ವ ಅತಿಥಿ ಖ್ಯಾತ ವಕೀಲ ಇಮ್ತಿಯಾಝ್ ಬಂಟ್ವಾಳ್ ರವರು ಮಾತನಾಡಿ, “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮುಸ್ಲಿಮ್ ವೀರರ ಹೆಸರುಗಳನ್ನು ಇತಿಹಾಸ ದಿಂದ ಅಳಿಸಿ ಹಾಕುವ ಹುನ್ನಾರದ ಮಧ್ಯೆ ಇಂಥ ಸ್ವಾತಂತ್ರ್ಯೋತ್ಸವಗಳು ಮುಂದಿನ ತಲೆಮಾರಿಗೆ ಮುಸ್ಲಿಮ್ ಸಮುದಾಯದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಲಿ. ಮದ್ರಸಗಳಲ್ಲಿ ಸಂವಿಧಾನ ಬೋಧನೆಯಿಂದ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಮುಂದಿನ ತಲೆಮಾರು ಅರಿತುಕೊಳ್ಳುವಂತಾಗಲಿ” ಎಂದು ಹೇಳಿದರು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ “ಭಾರತದ ಸ್ವಾತಂತ್ರ್ಯಕ್ಕೆ ಮುಸ್ಲಿಮರ ಕೊಡುಗೆಯ ಇತಿಹಾಸವನ್ನು ಇಂದಿನ ಮಕ್ಕಳಿಗೆ ಕಲಿಸಬೇಕಾದ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೇವಲ ಲೌಕಿಕ ಜ್ಞಾನಕ್ಕೆ ಮಹತ್ವ ನೀಡಿ ತಮ್ಮ ಮಕ್ಕಳನ್ನು ಅಂಕ ಗಳಿಸುವ ಯಂತ್ರ ಗಳನ್ನಾಗಿಸುವ ಇಂದಿನ ಪೋಷಕರು ಅವರ ಧಾರ್ಮಿಕ ಜ್ಞಾನದ ಬಗ್ಗೆ ಅಜ್ಞರಾಗಿದ್ದಾರೆ. ಮಕ್ಕಳನ್ನು ಸಮುದಾಯದ ಆಸ್ತಿಯನ್ನಾಗಿಸುವ ಪ್ರಯತ್ನ ನಡೆಯಬೇಕಾಗಿದೆ” ಎಂದು ಹೇಳಿದರು.
ಕುದ್ರೋಳಿ ಶಾಖಾಧ್ಯಕ್ಷ ವಕಾಝ್ ಅರ್ಶಲನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಉಮರ್ ಮುಖ್ತಾರ್ ಕಿರ್ ಅತ್ ಪಠಿಸಿದರು. ಈ ಸಂದರ್ಭದಲ್ಲಿ ದಾರುಲ್ ಇಲ್ಮ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.