ಬಾಲ್ಯ ವಿವಾಹದಲ್ಲಿ ಕರ್ನಾಟಕ 2ನೇ ಸ್ಥಾನ ಹೊಂದಿರುವುದು ದುರದೃಷ್ಟಕರ : ಲಕ್ಷ್ಮೀ ಹೆಬ್ಬಾಳ್ಕರ್ ವಿಷಾದ

Update: 2024-07-13 09:32 GMT

ಮಂಗಳೂರು, ಜು. 13: ಕರ್ನಾಟಕವು ಬಾಲ್ಯ ವಿವಾಹ ಪ್ರಕರಣದಲ್ಲಿ ದೇಶದಲ್ಲಿ ಎರಡನೇ ಸ್ಥಾನ ಹೊಂದಿರುವುದು ದುರದೃಷ್ಟಕರ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಪ್ರತಿಕ್ರಿಯೆ ನೀಡಿದರು.

ಬಾಲ್ಯ ವಿವಾಹ ನಾವೆಲ್ಲಾ ತಲೆ ತಗ್ಗಿಸುವ ವಿಚಾರ. ನಮ್ಮ ಇಲಾಖೆಯಿಂದ ಸಾಕಷ್ಟು ಕ್ರಮಗಳು ಆಗಿದೆ. ಇದಕ್ಕೆ ನಮ್ಮ ಒಂದು ಇಲಾಖೆಯ ಲೋಪದೋಷವೆಂದು ಮಾತ್ರ ಹೇಳಲು ಸಾಧ್ಯವಿಲ್ಲ. ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯತ್, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ, ಕಾನೂನು, ಆರೋಗ್ಯ, ಪೊಲೀಸ್ ಇಲಾಖೆ ಸಹಕಾರ ನೀಬೇಕು. ಎಲ್ಲರೂ ಒಗ್ಗಟಾಗಿ ಕೆಲಸ ಮಾಡಿದಾಗ ಈ ಬಾಲ್ಯ ವಿವಾಹ ತಡೆಗಟ್ಟಲು ಸಾದ್ಯವಿದೆ ಎಂದವರು ಹೇಳಿದರು.

ರಾಜ್ಯದಲ್ಲಿ ಬಳ್ಳಾರಿ ಪ್ರಥಮ ಸ್ಥಾನದಲ್ಲಿದ್ದು, ಬೆಳಗಾವಿ ಎರಡನೇ ಜಿಲ್ಲೆ ಎನ್ನಲು ನಾಚಿಕೆ ಆಗುತ್ತೆ. ಅದು ಮೂಢನಂಬಿಕೆಯಿಂದ ಮಾಡುತ್ತಾರೆ. ಯಾಕಾಗಿ ಎಂಬ ಕಾರಣ ತಿಳಿಯುತ್ತಿಲ್ಲ.

ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಕಮಿಟಿ ಇದೆ. ಅದರಲ್ಲಿ ವಕೀಲರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಇರುತ್ತಾರೆ. ಕಟ್ಟು ನಿಟ್ಟಿನ ನಿರ್ದಾಕ್ಷಿಣ್ಯ ಕ್ರಮ ಆಗುತ್ತದೆ. ನಮಗೆ ವಿಚಾರ ಗೊತ್ತಾದ ತಕ್ಷಣ ಎಫ್.ಐ.ಆರ್ ಮಾಡುತ್ತೇವೆ. ಆದರೂ ಬಾಲ್ಯ ವಿವಾಹ ನಡೆಯುತ್ತಿರುತ್ತದೆ. ಬಾಲಾವಸ್ಥೆಯಲ್ಲೇ ಗರ್ಭಿಣಿ ಆಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ತಳ ಮಟ್ಟದಿಂದ ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೂ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಅಂಗನವಾಡಿಯನ್ನು ಮೊಂಟಸರಿಗಳಾಗಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿಗಳಿವೆ. ಪ್ರಥಮ ಹಂತದಲ್ಲಿ 20 ಸಾವಿರ ಅಂಗನವಾಡಿಗಳನ್ನು ಸರಕಾರಿ ಮೊಂಟೆಸ್ಸರಿಗಳಾಗಿ ಪರಿವರ್ತಿಸಲಾಗುವುದು. ಮೊಂಟೆಸ್ಸರಿ ಮಾಡಿದ ಮೇಲೆ ವಿದ್ಯೆ ಹೇಳಿಕೊಡುವ ಶಿಕ್ಷಕರ ವಿದ್ಯಾರ್ಹತೆ ಚೆನ್ನಾಗಿರಬೇಕು.

ಇಲಾಖೆಯಲ್ಲಿ 15 ಸಾವಿರ ಅಂಗನವಾಡಿ ಕಾರ್ಯಕರ್ತರು ಪದವಿ ಮಾಡಿದವರಿದ್ದಾರೆ. 2 ಸಾವಿರ ಸ್ನಾತಕೋತ್ತರ ಪದವಿ ಮಾಡಿದವರಿದ್ದಾರೆ. ಇಂತವರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಗವರ್ನಮೆಂಟ್ ಮೊಂಟೆಸ್ಸರಿ ಅಂತ ಮಾಡಲಾಗುವುದು. ಕೇಂದ್ರ, ರಾಜ್ಯ ಸರಕಾರದ ಸಹಯೋಗದಲ್ಲಿ ಜಂಟಿಯಾಗಿ ಸ್ಮಾರ್ಟ್ ತರಗತಿಗಳನ್ನು ನಡೆಸಲಾಗುತ್ತಿದ್ದು, ಕೇಂದ್ರ ಸರಕಾರದ ಮಹಿಳಾ ಕಲ್ಯಾಣ ಅಭಿವೃದ್ಧಿ ಸಚಿವರು ಸಾಥ್ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆ ಎರಡರಲ್ಲೂ ಕಲಿಯುವ ಅವಕಾಶ ಇರಲಿದೆ ಎಂದು ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಲ್ಕರ್ ಶನಿವಾರ ಮಂಗಳೂರಿನಲ್ಲಿ ವಿವರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News