ಕಬಕ: ರಸ್ತೆ ಅಪಘಾತಕ್ಕೆ ದ್ವಿಚಕ್ರ ವಾಹನ ಸವಾರ ಬಲಿ; ಇಬ್ಬರಿಗೆ ಗಾಯ
ಪುತ್ತೂರು, ಫೆ.26: ದ್ವಿಚಕ್ರ ವಾಹನ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಢಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಬಕ ಸಮೀಪದ ಪೋಳ್ಯದಲ್ಲಿ ರವಿವಾರ ರಾತ್ರಿ ನಡೆದಿದೆ.
ಪುತ್ತೂರು ನೆಹರೂ ನಗರ ಎಂಬಲ್ಲಿರುವ ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್ ರಾಜ(45) ಮೃತಪಟ್ಟವರು. ಸ್ಕೂಟರ್ ಸಹಸವಾರರಾಗಿದ್ದ ಬಿಹಾರ ಮೂಲದ ಸುರೇಂದರ್ (29) ಮತ್ತು ಸನ್ನೀಫ್ (28) ಎಂಬವರು ಗಾಯಗೊಂಡಿದ್ದಾರೆ.
ರವಿವಾರ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ರಜೆಯಿದ್ದ ಕಾರಣ ಕ್ಲಿಫರ್ಡ್ ಮೊರಾಸ್ ಅವರು ಅಳಕೆಮಜಲಿನಲ್ಲಿ ಖಾಸಗಿ ಕೆಲಸ ನಿರ್ವಹಿಸಲೆಂದು ಸುರೇಂದರ್ ಮತ್ತು ಸನ್ನೀಫ್ ರನ್ನು ಕರೆಸಿಕೊಂಡಿದ್ದರು. ರಾತ್ರಿ ವೇಳೆ ಅವರಿಬ್ಬರನ್ನು ಅವರು ವಾಸ್ತವ್ಯವಿರುವ ಮುರ ಎಂಬಲ್ಲಿನ ರೂಮ್ ಗೆ ಬಿಡಲೆಂದು ಸ್ಕೂಟರ್ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಪೋಳ್ಯ ತಿರುವಿನಲ್ಲಿ ಢಿಕ್ಕಿ ಸಂಭವಿಸಿದೆ. ಇದರಿಂದ ತೀವ್ರ ಗಾಯಗೊಂಡಿದ್ದ ಕ್ಲಿಫರ್ಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಹ ಸವಾರರಾಗಿದ್ದ ಸುರೇಂದರ್ ಅವರ ಎಡ ಕಾಲು ಮುರಿತಕ್ಕೊಳಗಾಗಿದ್ದು, ಸನ್ನೀಫ್ ಅವರ ಮುಖಕ್ಕೆ ಗಾಯವಾಗಿದೆ. ಗಾಯಾಳುಗಳಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮೃತ ರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.