ಕೈಕಂಬ: ಮಾದಕ ವ್ಯಸನದ ಅರಿವು ಜಾಗೃತಿ ಕಾರ್ಯಕ್ರಮ

Update: 2023-11-21 16:45 GMT

ಕೈಕಂಬ: ಖಿದ್ಮಾ ಫೌಂಡೇಶನ್ ಗುರುಕಂಬಳ, ಜಿಎನ್ಆರ್ ಇ ವೆಲ್ಫೇರ್ ಆ್ಯಂಡ್ ಎಜುಕೇಶನ್ ಟ್ರಸ್ ಗಂಜಿಮಠ ಇದರ ಸಹಯೋಗದಲ್ಲಿ ಮಾದಕ ವ್ಯಸನದ ಅರಿವು ಜಾಗೃತಿ ಕಾರ್ಯಕ್ರಮವು ಗಂಜಿಮಠದ ಝಾರ ಕನ್ವೆನ್ಶನ್ ಸೆಂಟರ್ ನಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಮಕ್ಕಳು ದಾರಿ ತಪ್ಪಲು ಮಾದಕ ವ್ಯಸನಗಳ ದಾಸರಾಗಲು ಮನೆಯ ವಾತಾವರಣ ಮುಖ್ಯ ಕಾರಣ. ಮಕ್ಕಳ ಜೀವನ ಶೈಲಿಗೆ ತಂದೆ ತಾಯಿ ಕಾರಣ. ಅವರ ಪ್ರತಿಯೊಂದು ಆಗು ಹೋಗುಗಳ ಕುರಿತು ಗಮನ ಹರಿಸುತ್ತಿರಬೇಕು. ಮನೆಯಲ್ಲಿ ಲಭಿಸುವ ಶಿಕ್ಷಣ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎಂದು ನುಡಿದರು.

ಮಕ್ಕಳು 12ವರ್ಷದವರಾಗುವಾಗ ಅಮಲು ಪದಾರ್ಥ ಸೇವನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದಕ್ಕೆ ಮನೆಯವರು ಮಕ್ಕಳೊಂದಿಗೆ ಕಾಲ ಕಳೆಯದಿರುವುದು ಮುಖ್ಯ ಕಾರಣ. ತಮ್ಮ ಮಕ್ಕಳ ಜೊತೆ ಪೋಷಕರು ಸ್ನೇಹಿತರಾಗಿರಬೇಕು ಹೊರತು ವೈರಿಗಳಂತೆ ಕಾಣಬಾರದು. ಅದ್ಯಯನಗಳ ಪ್ರಕಾರ, ಮನೆಯ ಸದಸ್ಯರ ನಡುವೆ ಉತ್ತಮ ಸಹಭಾಳ್ವೆ ಇರುವ ಮನೆಗೆಳ ಮಕ್ಕಳು ಅಮಲು ಪದಾರ್ಥಗಳ ದಾಸರಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಮೂಡಬಿದಿರೆ ಆಳ್ವಾಸ್ ಪುನರ್ಜನ್ಮ ದುಶ್ಚಟ ನಿವಾರಣಾ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ ಕೆ. ಅವರು, ಮುಂಜಾಗ್ರತೆಯಿಂದ ಮಾತ್ರ ಮದ್ಯ, ಮಾದಕ ವ್ಯಸನದಿಂದ ದೂರ ಇರಲು ಸಾಧ್ಯ. ಮನುಷ್ಯನ ಸಾವಿಗೆ ಎರಡನೇ ದೊಡ್ಡ ಕಾರಣ ಆತ್ಮಹತ್ಯೆ. ಜಗತ್ತಿನಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಮಾದಕ ಪದಾರ್ಥಗಳು ಮುಖ್ಯ ಕಾರಣ ಎಂದರು.

ವ್ಯಸನಿಗಳಲ್ಲಿ ಬಡವರು-ಶ್ರೀಮಂತರು, ಉದ್ಯೋಗಿ-ನಿರುದ್ಯೋಗಿ ಜಾತಿ-ಧರ್ಮಗಳೆಂದಿಲ್ಲ, ಯಾರು ಬೇಕಾದರೂ ಇದರ ದಾಸರಾಗಬಹುದು. ರುಚಿ ನೋಡುವುದರೊಂದಿಗೆ ಆರಂಭವಾಗುವ ಅಮಲು ಪದಾರ್ಥದ ಸಹವಾಸ ಅಪರಾಧಿಯಾಗಿ ಅಥವಾ ಸಾವಿನೊಂದಿಗೆ ಅಂತ್ಯವಾಗುತ್ತದೆ. ಕೆಲವೊಬ್ಬರು ನಿತ್ಯ ಜೀವನದ ಒತ್ತಡ ಕಡಿಮೆ ಮಾಡುವ ನೆಪದಲ್ಲಿ ದಾಸರಾಗುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಮಾದಕ ವಸ್ತುಗಳಿಂದ ಒತ್ತಡ ಕಡಿಮೆಯಾಗುವುದಿಲ್ಲ. ಯುವ ಜನರು ಮೊಬೈಲ್‌ ಗಳ ನಿರಂತರ ಬಳಕೆಯಿಂದ ಮಾದಕ ವಸ್ತುಗಳಿಗೆ ಹತ್ತಿರವಾಗುತ್ತಿದ್ದಾರೆ ಎಂದು ನುಡಿದರು.

ಕಾರ್ಯಕ್ರದ ಅಧ್ಯಕ್ಷತೆಯನ್ನು ಖಿದ್ಮಾ ಫೌಂಡೇಶನ್ ಅಂತಾರಾಷ್ಟ್ರೀಯ ಅಧ್ಯಕ್ಷ ಸಿದ್ದೀಕ್ ಮಿರ್ಝಾ ವಹಿಸಿ ಮಾತನಾಡಿ ದರು. ಗುರುಪುರ ಪೊಂಪೈ ಮಾತೆಯ ದೇವಾಲಯದ ಧರ್ಮಗುರು ಫಾ. ರುಡಾಲ್ಫ್ ರವಿ ಡೇಸ, ಜಿಎನ್ಆರ್ ಇ ವೆಲ್ಫೇರ್ ಆ್ಯಂಡ್ ಎಜುಕೇಶನ್ ಟ್ರಸ್ಟ್ ಪ್ರತಿನಿಧಿ ಇರ್ಶಾದ್ ಅಹ್ಮದ್ ಉಪಸ್ಥಿತರಿದ್ದು ಮಾತನಾಡಿದರು.

ಖಿದ್ಮಾ ಫೌಂಡೇಶನ್ ಅಧ್ಯಕ್ಷ ಸೈಯ್ಯದ್ ಅನ್ವರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಡಾ‌. ಇ.ಕೆ.ಎ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು. ಜಿಎನ್ಆರ್ ಇ ವೆಲ್ಫೇರ್ ಆ್ಯಂಡ್ ಎಜುಕೇಶನ್ ಟ್ರಸ್ಟ್ ಸೌದಿ ಅರೆಬಿಯಾ ಘಟಕದ ಕಾರ್ಯದರ್ಶಿ ಝಾಹಿರ್‌ ಬಿ. ನಝೀರ್‌ ಧನ್ಯವಾದ ಸಮರ್ಪಿಸಿದರು. ಪ್ರಮೋದ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News