ಕಿನ್ನಿಗೋಳಿ: ಬೃಹತ್‌ ರಕ್ತದಾನ ಶಿಬಿರ

Update: 2023-09-19 15:20 GMT

ಕಿನ್ನಿಗೋಳಿ, ಸೆ.19: ಖಿಲ್‌ರಿಯಾ ಜುಮ್ಮಾ ಮಸೀದಿ ಸುವರ್ಣ ಮಹೋತ್ಸವ ಪ್ರಯುಕ್ತ ಸುವರ್ಣ ಮಹೋತ್ಸವ ಸಮಿತಿ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಸಹಯೋಗದಲ್ಲಿ ಕೆಜೆಎಂ ಸಮುದಾಯ ಭವನ ಶಾಂತಿನಗರದಲ್ಲಿ ರವಿವಾರ ಬೃಹತ್‌ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಖಿಲ್‌ರಿಯಾ ಜುಮ್ಮಾ ಮಸೀದಿ ಖತೀಬ್ ಉಮರುಲ್‌ ಫಾರೂಕ್‌ ಸಖಾಫಿ ಅವರ ದುವಾ ಆಶೀರ್ವಚನದ ಜೊತೆಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಓರ್ವನ ಪ್ರಾಣ ಉಳಿಸುವ ನಿಟ್ಟಿನಲ್ಲಿ ಯಾವೆಲ್ಲ ಪ್ರಯತ್ನ ಸಾಧ್ಯವಿದೆಯೋ ಅದನ್ನು ಅನುಸರಿಸುವುದು ಇಸ್ಲಾಮಿನ ನಿಯಮವಾಗಿದೆ. ರಕ್ತದಾನ ಎನ್ನೋದು ಇನ್ನೊಂದು ಜೀವಕ್ಕೆ ಮರು ಜನ್ಮ ನೀಡಲು ನಮಗೆ ಸೃಷ್ಟಿಕರ್ತನು ನೀಡಿದ ಅನುಗ್ರಹವಾಗಿದೆ. ಅಂತಹ ಅವಕಾಶವನ್ನು ನಾವು ಯಾವತ್ತೂ ಕಳೆದುಕೊಳ್ಳಬಾರದು. ರಕ್ತದಾನದ ಮೂಲಕ ನಾವೆಲ್ಲರು ಮನುಷ್ಯ ಧರ್ಮವನ್ನು ಪಾಲಿಸಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಹಿಲ್ಡಾ ಡಿಸೋಜಾ ಮಾತನಾಡಿ, ರಕ್ತದಾನ ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸಮಾಜದಲ್ಲಿ ನಾವೆಲ್ಲರೂ ಒಂದು ಎನ್ನುವ ಭಾವನೆಯನ್ನು ಜಾಗೃತಗೊಳಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಜೆಎಂ ಅಧ್ಯಕ್ಷ ಜೆ.ಎಚ್. ಜಲೀಲ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹಾಜಿ ಟಿ.ಎಚ್‌. ಮಯ್ಯದ್ದಿ, ರೋಟರಿ ಕ್ಲಬ್‌ ಅಧ್ಯಕ್ಷ ತ್ಯಾಗರಾಜ್‌, ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಧರ್ಮದರ್ಶಿ ವಿವೇಕಾನಂದ, ಮುಸ್ಲಿಂ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆ.ಎ. ಇಬ್ರಾಹಿಂ ಕಾರ್ನಾಡ್‌ ಮಾತನಾಡಿದರು.

ವೇದಿಕೆಯಲ್ಲಿ ನೂರುಲ್‌ ಹುದಾ ಅಸೋಸಿಯೇಶನ್ ಅಧ್ಯಕ್ಷ ಎಂ. ಖಾದರ್‌, ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.‌ ಅಬ್ದುಲ್‌ ರಝಾಕ್‌, ಉಪಾಧ್ಯಕ್ಷ ಬಿ.ಸೈದಾಲಿ ಹಾಗೂ ಜೆಎಚ್‌ ಮುಹಮ್ಮದ್‌, ಕೋಶಾಧಿಕಾರಿ ಟಿ.ಎ. ಹನೀಫ್, ಕೆಜೆಎಂ ಆಡಳಿತ ಮಂಡಳಿ ಉಪಾಧ್ಯಕ್ಷ ವಿ. ಅಬೂಬಕ್ಕರ್‌, ನೂರುಲ್‌ ಹುದಾ ಪ್ರಧಾನ ಕಾರ್ಯದರ್ಶಿ ಮುಬೀನ್‌, ಕೆಎಂಸಿ ಆಸ್ಪತ್ರೆ ಅತ್ತಾವರ ಬ್ಲಡ್ ಬ್ಯಾಂಕ್‌ ಮೇಲ್ವಿಚಾರಕಿ ದಕ್ಷಾ ಶೆಟ್ಟಿ, ಗುಲಾಂ ಹುಸೇನ್‌, ಆರೀಫ್‌, ಶಫೀಕ್‌ ತುಂಬೆಗುಂಡಿ, ಕಬೀರ್‌ ಗುತ್ತಕಾಡು ಉಪಸ್ಥಿತರಿದ್ದರು.

ಟಿ.ಎಚ್‌. ಮಯ್ಯದ್ದಿ ಸ್ವಾಗತಿಸಿದರು. ಟಿ.ಕೆ. ಅಬ್ದುಲ್‌ ಖಾದರ್‌ ನಿರೂಪಿಸಿ, ವಂದಿಸಿದರು. ಸುಮಾರು 70ಕ್ಕೂ ಅಧಿಕ ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News