ಮಕ್ಕಳ ಭವಿಷ್ಯಕ್ಕೆ ಪೂರಕವಾಗಿ ರಾಜಕಾರಣ ಮಾಡಿ: ರಾಜಕಾರಣಿಗಳಿಗೆ ಸಂಸದ ಸಸಿಕಾಂತ್ ಸೆಂತಿಲ್ ಮನವಿ

Update: 2024-09-03 11:13 GMT

ಮಂಗಳೂರು: ರಾಜಕೀಯ ಪಕ್ಷಗಳ ನಾಯಕರು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಪೂರಕವಾಗಿ ರಾಜಕಾರಣ ಮಾಡಬೇಕು. ಇಂದು ಮಕ್ಕಳಲ್ಲಿ ಕಾಣುತ್ತಿರುವ ರಾಜಕೀಯ ಹಾಗೂ ಸಿದ್ಧಾಂತ ದ್ವೇಷಕ್ಕೆ ಬದಲಾಗಿ ಶಾಂತಿ, ಸಮಾಧಾನ, ಪ್ರೀತಿಯ ರಾಜಕಾರಣ ಭವಿಷ್ಯವನ್ನು ರೂಪಿಸಬೇಕು ಎಂದು ದ.ಕ. ಜಿಲ್ಲಾ ಮಾಜಿ ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂತಿಲ್ ಸಲಹೆ ನೀಡಿದ್ದಾರೆ.

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮತ್ತು ಸಾಮರಸ್ಯ ಮಂಗಳೂರು ಇವರ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ಸಂತ ಮದರ್ ತೆರೇಸಾರ ಸಂಸ್ಮರಣಾ ದಿನಾಚರಣೆ ಸಲುವಾಗಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು, ಪೋಷಕರು ತಮ್ಮ ಮಕ್ಕಳನ್ನು ಅಂಕಗಳಿಗೆ ಸೀಮಿತವಾಗಿ ಸ್ಪರ್ಧಾತ್ಮಕವಾಗಿ ಬೆಳೆಸಲು ಪ್ರಯತ್ನಿಸುತ್ತಾರೆ. ಆದರೆ ನಾವು ಮಕ್ಕಳಲ್ಲಿ ಸಹಕಾರ ಹವ್ಯಾಸವನ್ನು ಬೆಳೆಸಬೇಕು. ಈ ರೀತಿಯ ಪ್ರೀತಿ, ಸಹಕಾರ ಮನಸ್ಥಿತಿಯ ಸಮಾಜ ವನ್ನು ಕಟ್ಟುವುದೇ ನಾವು ಮದರ್ ತೆರೆಸಾ ಅವರಿಗೆ ಸಲ್ಲಿಸುವ ಗೌರವ ಎಂದವರು ಹೇಳಿದರು.

ಮಕ್ಕಳು ಸಂವಿಧಾನದ ಮೌಲ್ಯಗಳ ಬಗ್ಗೆ ತಿಳಿದಿರಬೇಕು. ಪ್ರೀತಿಯಿಂದ ವಿಭ್ನಿನತೆಯನ್ನು ಆಚರಣೆ ಮಾಡುವ ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದ ಅವರು, ಮದರ್ ತೆರೆಸಾ ಕೇವಲ ಮಾನವರಲ್ಲ ಆಕೆ ತಾಯಿ ಎಂದು ವಿಶ್ಲೇಷಿಸಿದರು.

ದೇಶದಲ್ಲಿ ಬಹಳ ಹಿಂದಿನಿಂದಲೂ ಎರಡು ಮನಸ್ಥಿತಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಒಂದು ಮನಸ್ಥಿತಿ ಎಲ್ಲರನ್ನು ಸಮಾನವಾಗಿ ನೋಡುವಂತದ್ದು, ಎಲ್ಲರನ್ನು ಪ್ರೀತಿಸುವುದು, ಎಲ್ಲರನ್ನು ಸಹೋದರತ್ವದಿಂದ ನೋಡುವುದು. ಇನ್ನೊಂದು ಮನಸ್ಥಿತಿ ಮೇಲು ಕೀಳಿನ ಭಾವನೆಯನ್ನು ಮೂಡಿಸುವಂತದ್ದು. ಇಂದಿಗೂ ಈ ವರ್ಚಸ್ಸು ಮತ್ತು ಸಮಾನತೆಯ ನಡುವೆ ಸಂಘರ್ಷ ಮುಂದುವರಿಯುತ್ತಲೇ ಇದೆ ಎಂದವರು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ನಮ್ಮ ಹೋರಾಟ ಎಂದೇ ಪರಿಗಣಿಸಲಾಗುತ್ತದೆ. ಆದರೆ ನನ್ನ ಪ್ರಕಾರ ಬ್ರಿಟಿಷರ ವಿರುದ್ಧದ ಹೋರಾಟ ಶೇ. 30ರಷ್ಟಾಗಿದ್ದು, ಶೇ. 70ರಷ್ಟು ಹೋರಾಟ ನಡೆದಿದ್ದು ಸಮಾನತೆಗಾಗಿ. ಕೇವಲ ಧೋತಿಯೊಂದಿಗೆ ಬರೀ ಮೈಯ್ಯಲ್ಲಿ ಇರುತ್ತಿದ್ದ ಗಾಂಧೀಜಿ ಸಮಾನತೆಯ ಸಂಕೇತವಾಗಿದ್ದರು. ಸ್ವಾತಂತ್ರ್ಯದ ನಂತರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಸಮಾನತೆಗೆ ಲಿಖಿತ ರೂಪ ನೀಡಲಾಯಿತು. ದೇಶವನ್ನು ಯಾವ ರೀತಿಯಲ್ಲಿ ಸಮಾನವಾಗಿ ಮಾಡಬೇಕೆಂಬ ಚಿಂತನೆಯೊಂದಿಗೆ ಸಂವಿಧಾನ ರಚಿಸಲಾಯಿತು. ಈ ಸಮಾನತೆಯನ್ನು ಅಂದೂ ಬಹಳ ಮಂದಿ ಒಪ್ಪಿರಲಿಲ್ಲ. ಇಂದೂ ಒಪ್ಪುತ್ತಿಲ್ಲ. ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಿದ ನಾವು ಸ್ವತಂತ್ರ ಭಾರತದಿಂದ ನಾವು ಭಾರತವನ್ನು ಸೃಷ್ಟಿಸುವಾಗ ಒಟ್ಟಾಗಿ ಇರುತ್ತೇವೆ ಎಂಬ ಛಲದಿಂದ ದೇಶವನ್ನು ಕಟ್ಟಿದ್ದೇವೆ. ವಿಭಿನ್ನತೆಯನ್ನು ಸಂಭ್ರಮಿಸುವ ಮನಸ್ಥಿತಿಯೇ ಭಾರತದ ಕಲ್ಪನೆ. ಈ ಸುಂದರ ಪರಿಕಲ್ಪನೆಯಡಿ ವಿಭಿನ್ನತೆಯನ್ನು ಆಚರಣೆ ಮಾಡುವ ದೇಶ ಪ್ರಪಂಚದಲ್ಲಿ ಭಾರತ ಹೊರತುಪಡಿಸಿ ಇನ್ನೊಂದಿಲ್ಲ. ಹಾಗಾಗಿ ನಮ್ಮ ಸಂವಿಧಾನದಲ್ಲಿಯೇ ಆಚರಣೆ, ಸಮಾನತೆಯನ್ನು ಒಳಪಡಿಸಿದ್ದೇವೆ. ಸಂವಿಧಾನ ಇಲ್ಲದಿದ್ದರೆ ಇಷ್ಟೊಂದು ಪ್ರೀತಿ, ಸಮಾನತೆಯಿಂದ ಇರಲು ಸಾಧ್ಯವಿರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಪರಸ್ಪರ ವಿಭಿನ್ನತೆಯನ್ನು ಸಂಭ್ರಮಿಸಿ ಎಂಬುದು ಮದರ್ ತೆರೆಸಾ ಅವರ ಸಂದೇಶವೂ ಆಗಿತ್ತು ಎಂದು ಸಸಿಕಾಂತ್ ಸೆಂತಿಲ್ ವ್ಯಾಖ್ಯಾನಿಸಿದರು.

‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ..’ ಕುರಿತು ಮಾತನಾಡಿದ ವಿಧಾನ

ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂವಿಧಾನದ ಆಶಯಗಳನ್ನು ನುಚ್ಚುನೂರು ಮಾಡುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಧರ್ಮ ಪ್ರಭುತ್ವಕ್ಕೆ ವ್ಯವಸ್ತಿತ ಪಿತೂರಿ ನಡೆಯುತ್ತಿದೆ ಎಂದು ಹೇಳಿದರು.

ಸಂವಿಧಾನವೇ ದೇಶದ ಪವಿತ್ರ ಗ್ರಂಥವಾಗಿದ್ದು, ಈಗ 22 ಭಾಷೆಗಳಿದ್ದು, ತುಳು, ಕೊಡವ ಸೇರಿದಂತೆ ಇನ್ನೂ 26 ಭಾಷೆ ಸೇರ್ಪಡೆಗೆ ಪ್ರಯತ್ನ ನಡೆಯುತ್ತಿದೆ. ಧರ್ಮ ಪ್ರಭುತ್ವದ ಬಳಿಕ, ರಾಜ ಪ್ರಭುತ್ವ ಬಂದಾಯ್ತು, ಬಳಿಕ ಪ್ರಜಾಪ್ರಭುತ್ವ ಬಂದಿದೆ. ಈ 75 ವರ್ಷಗಳಲ್ಲಿ ಸಂವಿಧಾನ ನಮಗೆ ಏನೆಲ್ಲಾ ಅವಕಾಶಗಳನ್ನು ನೀಡಿದೆ ಎಂಬುದನ್ನು ಅರಿಯಬೇಕು. ಇಸ್ಲಾಂ, ಕ್ರಿಶ್ಚಿಯನ್‌ರ ಸೇವೆಯನ್ನೇ ಮತಾಂತರ ಎಂದು ಬಿಂಬಿಸಿ ಧರ್ಮದ ಹೆಸರಿನಲ್ಲಿ ಜನತೆಯ ನಂಬಿಕೆ, ಧೈರ್ಯ ಕುಸಿಯುವಂತೆ ಮಾಡುವ ಸಂಘಟನೆಗಳನ್ನು ದೂರ ಇರಿಸಬೇಕು. ಧರ್ಮ, ಅಪನಂಬಿಕೆಗಳನ್ನು ಹೋಗಲಾಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಸಾಮಾಜಿಕ ಚಿಂತಕಿ, ಸಾಹಿತಿ ಆಯಿಶಾ ಫರ್ಝಾನಾ ಪ್ರತಿಕ್ರಿಯೆ ವ್ಯಕ್ತಪಡಿಸಿ, ಮದರ್ ತೆರೆಸಾ ಅವರ ತ್ಯಾಗ ಇಡೀ ಪ್ರಪಂಚಕ್ಕೆ ದೊಡ್ಡ ಸಂದೇಶ ನೀಡಿದೆ ಎಂದರು.

ದುರಿತ ಕಾಲದಲ್ಲಿ ಬುದ್ಧ ತನ್ನ ಅರಮನೆ ತೊರೆದು ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡಿದಂತೆ, ಮದರ್ ತೆರೆಸಾ ರವರು ಭಾರತಕ್ಕೆ ಬಂದು ದೀನ ದಲಿತರ, ರೋಗಿಗಳ ಆರೈಕೆ ಮಾಡುತ್ತಾ ಮೈತ್ರಿ ಮತ್ತು ಕಾರುಣ್ಯದ ಬದುಕನ್ನು ತೋರಿ ಸಿಕೊಟ್ಟಿದ್ದಾರೆ. ಬುದ್ಧನ ಯಥಾವತ್ ರೂಪ ಯೇಸು ಎಂದು ಹೇಳಲಾಗುತ್ತದೆ. ಆ ಯೇಸುವಿನ ಸಿದ್ಧಾಂತವನ್ನು ಬಾಳಿ ಬದುಕಿದವರು ಮದರ್ ತೆರೆಸಾ ಎಂದು ತೆರೆಸಾ ಅವರ ಜೀವನದ ಪ್ರಮುಖ ಅಂಶಗಳನ್ನು ಫರ್ಝಾನಾ ವಿವರಿಸಿದರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಂಬುವ ಧರ್ಮಗ್ರಂಥಗಳು ನಮ್ಮ ಮನೆಗೆ ಸೀಮಿತವಾಗಿರಿಸಿ ಅದನ್ನು ಅನುಸರಿಸಬೇಕೇ ಹೊರತು ಮನೆಯ ಹೊರಗೆ ಬಂದಾಗ ಸಂವಿಧಾನದ ಆಶಯಗಳೇ ನಮ್ಮ ಬದುಕಾಗಬೇಕು ಎಂದರು.

ಸಾಮರಸ್ಯದ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ಗೌರವ ಸಲಹೆಗಾರರಾದ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವರೀಸ್, ವಂ.ಜೆ.ಬಿ.ಸಲ್ದಾನಾ, ವಂ. ರೂಪೇಶ್ ಮಾಡ್ತಾ, ವಂ. ಸುದೀಪ್ ಪೌಲ್, ಡಾ.ಕೃಷ್ಣಪ್ಪ ಕೊಂಚಾಡಿ, ಮುನೀರ್ ಕಾಟಿಪಳ್ಳ, ಎರಿಕ್ ಲೋಬೋ, ಆಲ್ವಿನ್ ಡಿಸೋಜಾ, ಬಿ.ಎನ್. ದೇವಾಡಿಗ, ಕರಿಯ ಮಂಗಳಜ್ಯೋತಿ, ಸುಮತಿ ಎಸ್.ಹೆಗ್ಡೆ, ಎಂ. ದೇವದಾಸ್, ದಿಯಾ ಎಚ್. ಪುತ್ರನ್, ಮುನಾಬ್, ನಿರೀಕ್ಷಿತ, ಮುಸ್ಕಾನ್, ಅಬುಸಾಲಿ, ಕಾವ್ಯ ಪೂರ್ವಿ ಶೆಟ್ಟಿ, ಸಂಗಮೇಶ್ ಮೊದಲಾದವರು ಉಪಸ್ಥಿತರಿದ್ದರು.

ಸಾಮರಸ್ಯ ಅಧ್ಯಕ್ಷೆ ಮಂಜುಳಾ ಸ್ವಾಗತಿಸಿದರು. ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಡಾಲ್ಫಿ ಡಿಸೋಜಾ ವಂದಿಸಿದರು.

ಮಾಜಿ ಜಿಲ್ಲಾಧಿಕಾರಿಗೆ ‘ಮುಟ್ಟಾಳೆ’ಯ ಸನ್ಮಾನ

ಸಮಾರಂಭದಲ್ಲಿ ಮಾಜಿ ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂತಿಲ್ ರವರನ್ನು ತುಳುನಾಡಿನ ‘ಮುಟ್ಟಾಳೆ’ ತೊಡಿಸಿ, ಸನ್ಮಾನಿಸಲಾಯಿತು.
















 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News