ಮಂಗಳೂರು: ಗಣ್ಯರಿಂದ ಸಾಹಿತಿ ಡಾ.ನಾ.ಡಿಸೋಜರಿಗೆ ಅಂತಿಮ ನಮನ
Update: 2025-01-06 05:11 GMT
ಮಂಗಳೂರು: ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರವಿವಾರ ಸಂಜೆ ನಿಧನರಾಗಿರುವ ಹಿರಿಯ ಸಾಹಿತಿ ಡಾ.ನಾ. ಡಿಸೋಜರಿಗೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ನಾ. ಡಿಸೋಜರ ಪಾರ್ಥಿವ ಶರೀರವನ್ನು ಅವರ ಸ್ವಂತ ಊರಾದ ಸಾಗರಕ್ಕೆ ಕೊಂಡೊಯ್ಯುವ ಮೊದಲು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಆವರಣದಲ್ಲಿ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.
ಸಾಹಿತಿಗಳಾದ ಕುಂ.ವೀರಭದ್ರಪ್ಪ, ಡಾ.ನಾ.ದಾಮೋದರ ಶೆಟ್ಟಿ, ಡಾ.ಬಿ.ಎ.ವಿವೇಕ ರೈ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ.ಸುದೀಪ್ ಪೌಲ್, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಮಂಗಳೂರು ಹೋಬಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೆಮಂಡ್ ಡಿ ಕುನ್ಹ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
ನಾ.ಡಿ.ಸೋಜರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಾ.ನಾ. ಡಿಸೋಜ ಅವರು ವಯೋಸಹಜ ಅನಾರೋಗ್ಯದಿಂದ ರವಿವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.