ಮಂಗಳೂರು: ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದಿಂದ 'ಸಂವಿಧಾನ ಸಂರಕ್ಷಣಾ ಜಾಥಾ’

Update: 2025-01-06 07:28 GMT

ಮಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ 'ಸಂವಿಧಾನ ಸಂರಕ್ಷಣಾ ಜಾಥಾ ನಡೆಯಿತು. ಈ ವೇಳೆ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಜೀನಾಮೆಗೆ ಒತ್ತಾಯಿಸಿದರು.

ಬೆಳಗ್ಗೆ ನಗರದ ಅಂಬೇಡ್ಕರ್ ವೃತ್ತದಿಂದ (ಹಳೆ ಜ್ಯೋತಿ ಸರ್ಕಲ್) ಮಿನಿ ವಿಧಾನಸೌಧದ ವರೆಗೆ 'ಸಂವಿಧಾನ ಸಂರಕ್ಷಣಾ ಜಾಥಾ’ನಡೆದು ಬಳಿಕ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ದೇಶದ ಚರಿತ್ರೆ ತಿಳಿಯದವರಿಗೆ ದೇಶವನ್ನು ಕಟ್ಟಲು ಅಸಾಧ್ಯ. ಅಮಿತ್ ಶಾ ಅವರೇ, ನೀವು ಈ ದೇಶದ ಸಂವಿಧಾನವನ್ನು ಓದಿದ್ದೀರಾ? ಎಂದು ಪ್ರಶ್ನಿಸಿದರು.

ಅಮಿತ್ ಶಾ ಹೇಳಿಕೆಯಿಂದ ದೇಶದ ಕೋಟ್ಯಂತರ ಜನ ನೊಂದಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡಿರುವ ಅಮಿತ್ ಶಾರನ್ನು ಸಂಪುಟದಿಂದ ವಜಾಗೊಳಿಸಲು ಪ್ರಧಾನಿಗೆ ಸೂಚನೆ ನೀಡಬೇಕು. ಪ್ರಧಾನಿ ಮಾಡದಿದ್ದರೆ ನೀವು ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ರಾಷ್ಟ್ರಪತಿಯನ್ನು ಆಗ್ರಹಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ' ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡುವ ಮೂಲಕ ಸಾಮಾಜಿಕ ನ್ಯಾಯ ವಂಚಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಮೋದಿಯವರು ಸಂವಿಧಾನದ ಪುಸ್ತಕ ಮುಂದಿಟ್ಟು ನಾಟಕ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡುತ್ತಿದೆ.ಜೈ ಗಾಂಧಿ, ಜೈ ಭೀಮ್ , ಜೈ ಸಂವಿಧಾನ ನಮ್ಮ ಧೈಯವಾಗಿದೆ ಎಂದು ರೈ ಹೇಳಿದರು.

ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಅಮಿತ್ ಶಾ ರಾಜೀನಾಮೆ ನೀಡುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಅಮಿತ್ ಶಾ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಂಪುಟದಿಂದ ವಜಾಗೊಳಿಸಿಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪ್ರತಿ ವಿಧಾನ ಕ್ಷೇತ್ರಗಳಲ್ಲೂ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ಮಾತನಾಡಿ, ಅಂಬೇಡ್ಕರ್ ಕಾರಣದಿಂದಾಗಿಯೇ ಅಮಿತ್ ಶಾ ಸಚಿವರಾಗಿದ್ದಾರೆ. ಅಂಬೇಡ್ಕರ್ ವಿಶ್ವಜ್ಞಾನಿಯಾಗಿದ್ದಾರೆ. ಅಂಬೇಡ್ಕರ್ ಹೆಸರಲ್ಲ ಅವರು ನಮ್ಮ ಉಸಿರು ಎಂದರು.

ರಾಜ್ಯ ಗೇರು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಮಾಜಿ ಶಾಸಕ ಜೆ.ಆರ್ ಲೋಬೊ, ಮಾಜಿ ಮೇಯರ್ ಗಳಾದ ಶಶೀಧರ ಹೆಗ್ಡೆ ಹಾಗೂ ಕೆ.ಅಶ್ರಫ್, ಕಾಂಗ್ರೆಸ್ ನಾಯಕರಾದ ಪದ್ಮರಾಜ್ ಆರ್. ಪೂಜಾರಿ, ಮಿಥುನ್ ರೈ, ಅನಿಲ್ ಕುಮಾರ್, ಸುಧೀರ್ ಕುಮಾರ್, ಶಾಲೆಟ್ ಪಿಂಟೊ, ಇನಾಯತ್ ಅಲಿ, ಎಂಜಿ ಹೆಗಡೆ, ಲುಕ್ಮಾನ್ ಬಂಟ್ವಾಳ, ಬಶೀರ್ ಬೈಕಂಪಾಡಿ, ಕೆ.ಕೆ.ಶಾಹುಲ್ ಹಮೀದ್, ಸುಹಾನ್ ಆಳ್ವ ಮತ್ತಿತರರು ಭಾಗವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News