ಮಂಗಳೂರು: ಮೀಫ್ ವತಿಯಿಂದ ಯೆನೆಪೋಯ ಕಾಲೇಜಿನಲ್ಲಿ NEET, JEE ಕಾರ್ಯಾಗಾರ

Update: 2023-12-19 10:12 GMT

ಮಂಗಳೂರು, ಡಿ19: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ತ ದ.ಕ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (MEIF ) ಇದರ ವತಿಯಿಂದ ಯೆನೆಪೋಯ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ NEET / JEE ಸ್ಪರ್ಥಾತ್ಮಕ ಮತ್ತು ಅರ್ಹತಾ ಪರೀಕ್ಷೆಯ ಜಿಲ್ಲಾ ಮಟ್ಟದ ಸರಣಿ ಕಾರ್ಯಾಗಾರದ ಉದ್ಘಾಟನೆಯು ಮಂಗಳವಾರ ಜೆಪ್ಪಿನಮೊಗರು ಯೆನೆಪೋಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ MEIF ಇದರ ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, "ಇಂದು ವಿದ್ಯಾರ್ಥಿಗಳಿಗೆ ತಾಂತ್ರಿಕ, ವೈದ್ಯಕೀಯ ಸೀಟಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ NEET / JEE  ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ಅವಶ್ಯಕತೆಯಿದ್ದು, MEIF ವತಿಯಿಂದ ಉಭಯ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ಯೆನೆಪೋಯ ಕಾಲೇಜಿನ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಯೆನೆಪೋಯ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥರಾದ ಮಿಸ್ರಿಯಾ ಜಾವೇದ್ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ಆಧುನಿಕವಾಗಿ ಸಿದ್ದಪಡಿಸುವುದು ಶಿಕ್ಷಣ ಕ್ಷೇತ್ರದ ಸವಾಲು ಎಂದರು.


ಮುಖ್ಯ ಅತಿಥಿಗಳಾಗಿ ಯೆನೆಪೋಯ ಕಾಲೇಜಿನ ಪ್ರಾಂಶುಪಾಲ ಉಜ್ವಲ್ ಮಿನೆಝಸ್,  MEIF ಉಪಾಧ್ಯಕ್ಷ ಮುಸ್ತಫಾ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಭಾಗವಹಿಸಿದ್ದರು.

ವೇದಿಕೆಯಲ್ಲಿ MEIF ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಬಿ.ಎ ಇಕ್ಬಾಲ್, ಅನ್ವರ್ ಗೂಡಿನಬಳಿ, ಪರ್ವೇಝ್ ಅಲಿ , ಬಿ.ಎ ನಝೀರ್ , ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಯೆನೆಪೋಯ ವಿದ್ಯಾ ಸಂಸ್ಥೆಯ ಸ್ಪರ್ಧಾತ್ಮಕ ಪರೀಕ್ಷಾ ಸಂಯೋಜಕ ಸಿನಾನ್ ಝಕರಿಯ ರವರು ಭಾಗವಹಿಸಿದರು. ಕಾರ್ಯಾಗಾರದಲ್ಲಿ MEIF ವ್ಯಾಪ್ತಿಯ ಜೆಪ್ಪಿನಮೊಗರು ಸುತ್ತಮುತ್ತಲಿನ 5 ಶಾಲೆಗಳ 152 ವಿದ್ಯಾರ್ಥಿಗಳು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News