ಪಶು ಸಖಿಯರ ಗೌರವಧನ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ: ಸಚಿವ ವೆಂಕಟೇಶ್

Update: 2025-04-05 14:42 IST
  • whatsapp icon

ಮಂಗಳೂರು, ಎ. 5: ಪಶುಸಖಿಯರ ಗೌರವಧನವನ್ನು ಹೆಚ್ಚಳ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ರಾಜ್ಯದಲ್ಲಿ ಸಿಎಂ ಅವರ ಗಮನಕ್ಕೂ ತರಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.

ಅವರು ಶನಿವಾರ ದ.ಕ. ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ, ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ವತಿಯಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಮತ್ತು ಪಶುರೋಗ ತಪಾಸಣಾ ಮತ್ತು ಮಾಹಿತಿ ಕೇಂದ್ರದ ಕಟ್ಟಡ ಉದ್ಘಾಟನೆ ಹಾಗೂ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪಶು ಸಖಿಯರನ್ನು ಕೇಂದ್ರ ಸರಕಾರದ ಮೂಲಕ ನೇಮಿಸಲಾಗಿದ್ದು, ಗ್ರಾಮಾಂತರ ಭಾಗದಲ್ಲಿ ಅವರ ಸೇವೆ ದೊಡ್ಡದಿದೆ. ಆದರೆ ಅವರಿಗೆ ಸಿಗುವ ಗೌರವಧನ ಬಹಳಷ್ಟು ಕಡಿಮೆಯಿದ್ದು, ಕನಿಷ್ಟ 5 ಸಾವಿರ ರೂ.ಗಳಿಗೆ ಏರಿಸಲು ಕೇಂದ್ರ ಸರಕಾರದ ಸಚಿವರ ಗಮನಕ್ಕೆ ತರಲಾಗುತ್ತದೆ. ಇದರ ಜತೆಗೆ ರಾಜ್ಯ ಸರಕಾರದಿಂದ ನೆರವು ನೀಡಲು ಸಿಎಂ ಅವರ ಗಮನಕ್ಕೂ ತರಲಾಗುವುದು ಎಂದರು.

ಹಾಲಿನ ದರ ಹೆಚ್ಚಳದ ಕುರಿತು ವಿರೋಧ ಪಕ್ಷಗಳು ಗೊಂದಲವನ್ನು ಹುಟ್ಟು ಹಾಕುತ್ತಿದೆ. ಅವರಿಗೆ ರೈತರ ಬಗ್ಗೆ ಚಿಂತೆಯೇ ಇಲ್ಲ. ನಾಲ್ಕು ರೂಪಾಯಿ ಹಾಲಿನ ದರ ಹೆಚ್ಚಳದಿಂದ ಅದು ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿದೆ. ಒಕ್ಕೂಟವಾಗಿರಲಿ ಅಥವಾ ಸರಕಾರಕ್ಕೆ ಈ ಮೊತ್ತ ಹೋಗುವುದಿಲ್ಲ. ರೈತರ ಪರವಾಗಿ ಸರಕಾರ ಉತ್ತಮ ಕೆಲಸ ಮಾಡಿದೆ ಎಂದರು.

ಎರಡು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ಲಾಭದಲ್ಲಿದೆ. ಪ್ರತಿದಿನ 3.40 ಲಕ್ಷ ಲೀ ಹಾಲು ಉತ್ಪಾದನೆ ಮಾಡಿಕೊಂಡು 1.60 ಲಕ್ಷ ಲೀ ಹಾಲನ್ನು ಹೊರಗಡೆಯಿಂದ ಖರೀದಿ ಮಾಡುವ ಮೂಲಕ ಲಾಭದಲ್ಲಿದೆ. ಮಂಡ್ಯ, ಮೈಸೂರು ಒಕ್ಕೂಟಗಳು ನಷ್ಟದಲ್ಲಿವೆ. ಅವರು ಹಾಲಿನ ಪರ್ಯಾಯ ಉತ್ಪನ್ನಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ 1 ಕೋಟಿ ಲೀ ಹಾಲು ಉತ್ಪಾದನೆಯಾಗುತ್ತಿತ್ತು. ಬೇಸಿಗೆಯಲ್ಲಿ 89 ಲಕ್ಷ ಲೀ.ಗೆ ತಲುಪಿದೆ. ಹೈನುಗಾರಿಕೆ ಲಾಭ ತಂದುಕೊಡುವ ಜತೆಗೆ ಮಹಿಳೆಯರಿಗೂ ನೆರವಾಗುತ್ತಿದೆ ಎಂದರು. ಇದೇ ಸಂದರ್ಭ ಪಶುಸಖಿಯರಿಗೆ ಪ್ರಮಾಣ ಪತ್ರ ವಿತರಣೆ, ಮೈತ್ರಿ ಯೋಜನೆಯ ಕೃತಕ ಗರ್ಭಧಾರಣೆಯ ಜಾಡಿಗಳನ್ನು ನೀಡಲಾಯಿತು.

ಈ ಸಂದರ್ಭ ದ.ಕ.ಜಿ.ಪಂ. ಸಿಇಒ ಡಾ.ಆನಂದ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ಡಾ.ಮಂಜುನಾಥ ಎಸ್. ಪಾಳೇಗಾರ್, ಜಂಟಿ ನಿರ್ದೇಶಕರಾದ ಡಾ.ಶಿವಣ್ಣ, ಡಾ.ಚಂದ್ರ ನಾಯ್ಕ್, ಕೊಬಲ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್, ಇಂಡಿಯನ್ ವೆಟರ್ನರಿ ಕೌನ್ಸಿಲ್ ಸದಸ್ಯ ಡಾ.ಸುಶಾಂತ್ ರೈ , ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ಮಂಗಳೂರು ಇದರ ಉಪನಿರ್ದೇಶಕ ಡಾ.ತಮ್ಮಯ್ಯ ಎ.ಬಿ ಮೊದಲಾದವರು ಉಪಸ್ಥಿತರಿದ್ದರು.

ದ.ಕ.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ಎನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News