ಮೋದಿ ಸರಕಾರದಿಂದ ಮಹಿಳೆಯರ ಪರ ಮೊಸಳೆ ಕಣ್ಣೀರು: ವೀರಪ್ಪ ಮೊಯ್ಲಿ ಟೀಕೆ
ಮಂಗಳೂರು, ಸೆ.23: ಕೇಂದ್ರದಲ್ಲಿರುವ ಮೋದಿ ಸರಕಾರದಿಂದ ಮಹಿಳೆಯರಿಗೆ ಸಂಬಂಧಿಸಿದಂತೆ ಮೊಸಳೆ ಕಣ್ಣೀರು ಸುರಿಸುವ ಕೆಲಸ ನಡೆದಿದೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸುವ ಮೂಲಕ ಅದನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಡಾ.ಎಂ.ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.
ಅವರು ಇಂದು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೇಂದ್ರ ಸರಕಾರಕ್ಕೆ ಮಹಿಳೆಯರ ಬಗ್ಗೆ ನೈಜ ಕಾಳಜಿಯಿದ್ದರೆ, ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಮಂಡಿಸಲು ಹತ್ತು ವರ್ಷಗಳ ಕಾಲ ಕಾಯಬೇಕಾಗಿರಲಿಲ್ಲ. ಒಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿಲ್ಲ. ಸಂಘ ಪರಿವಾರಕ್ಕೆ ಸೇರಿದವರು ಮನುವಾದ, ಗೋಳ್ವಾಲ್ಕರ್ ಸಿದ್ಧಾಂತದಲ್ಲಿ ನಂಬಿಕೆ ಇರುವವರು. ಶೂದ್ರರಿಗೆ, ಮಹಿಳೆಯರಿಗೆ ಓಟಿನ ಹಕ್ಕು ನೀಡಲು ಬೆಂಬಲಿಸಿದವರಲ್ಲ ಎಂದರು.
ದೇಶದ ಸಾಮಾಜಿಕ ಸ್ಥಿತಿಯಲ್ಲಿ ಮಹಿಳೆಯರ ಸ್ಥಾನ ಮಾನಕ್ಕೆ ಧಕ್ಕೆಯಾಗುವ ಘಟನೆಗಳು ನಡೆಯುತ್ತಿವೆ. ಲಿಂಗ ತಾರತಮ್ಯ ಹೆಚ್ಚಾಗಿದೆ. ದೇಶದ ಬಹುತ್ವಕ್ಕೆ ಹಾನಿಯಾಗುವ ಸಾಕಷ್ಟು ಘಟನೆಗಳು ವ್ಯಾಪಕವಾಗಿವೆ. ಸುಮಾರು 42 ಭಾಷೆಗಳು ಕಣ್ಮರೆಯಾಗುವ ಸ್ಥಿತಿಯಲ್ಲಿ ದೆ. ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯಿಂದ ಮಹಿಳೆಯರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಸ್ಥಿತಿ ಶೋಚನೀಯವಾಗಿದೆ. ಕಳೆದ 9ವರ್ಷದ ಲ್ಲಿ ದೇಶದ ಬಡತನ ಮತ್ತು ಆರ್ಥಿಕ ಅಸಮಾನತೆ ವಿಶ್ವ ದ ಹಲವು ರಾಷ್ಟ್ರಗಳ ಸಾಲಿಗೆ ಹೋಲಿಸಿದರೆ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ. ಕೇಂದ್ರ ಸರಕಾರದ ಈ ಬಾರಿಯ ಬಜೆಟ್ ರೈತರ, ಬಡವರ ಪರವಾಗಿರಲಿಲ್ಲ. ಈ ಎಲ್ಲ ಕಾರಣಕ್ಕೆ 2024ರ ಚುನಾವಣೆಯ ಫಲಿತಾಂಶ ಮಹಿಳೆಯರ ಮತ್ತು ಹಿಂದುಳಿದ ಜನಸಮುದಾಯದ ಜನಾಭಿಪ್ರಾಯದ ಮೇಲೆ ನಿರ್ಣಾಯಕ ವಾಗಲಿದೆ ಎಂದು ವೀರಪ್ಪ ಮೊಯ್ಲಿ ನುಡಿದರು.
ಜೆಡಿಎಸ್ ಜೊತೆ ಹೊಂದಾಣಿಕೆಯಿಂದ ಬಿಜೆಪಿಗೆ ನಷ್ಟ: -ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದರಿಂದ ನಷ್ಟ ಉಂಟಾಗುತ್ತದೆ ಹೊರತು ಬಿಜೆಪಿ ಲಾಭವಾಗುವುದಿಲ್ಲ. ಕಾಂಗ್ರೆಸ್ ಗೆ ಅದರ ಅನುಭವ ಆಗಿದೆ ಎಂದು ಮೊಯ್ಲಿ ನುಡಿದರು.
*ಬಿಜೆಪಿಯಿಂದ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ.ಸಂವಿಧಾನದಲ್ಲಿ ಇರುವ ಜಾತ್ಯತೀತ ಪದವನ್ನು ಅಳಿಸಿ ಪ್ರತಿಯನ್ನು ಹಂಚುತ್ತಾರೆ. ಅವರಿಗೆ ತಾಕತ್ತಿದ್ದರೆ ಸಂವಿಧಾನದಕ್ಕೆ ತಿದ್ದುಪಡಿ ಮಾಡಿ ಜಾತ್ಯತೀತ ಪದವನ್ನು ತೆಗೆದುಹಾಕಲಿ ಎಂದು ವೀರಪ್ಪ ಮೊಯ್ಲಿ ಸವಾಲೆಸೆದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕ ಬಳ್ಳಾಪುರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ವೀರಪ್ಪ ಮೊಯ್ಲಿ ವ್ಯಕ್ತಪಡಿಸಿದ್ದಾರೆ.
*ರಾಜ್ಯ ಸರಕಾರದಿಂದ ವಿಶೇಷ ಸಾಧನೆ: ರಾಜ್ಯದಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ 120 ದಿನಗಳಲ್ಲಿ 4 ಗ್ಯಾರಂಟಿ ಯೋಜನೆ ಗಳನ್ನು ಅನುಷ್ಠಾನ ಮಾಡುವ ಮೂಲಕ ದೇಶದಲ್ಲೇ ಮಹತ್ವದ ಸಾಧನೆ ಮಾಡಿರುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಅಭಿನಂದಿಸುವುದಾಗಿ ಮೊಯ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಪಕ್ಷದ ಇತರ ಪದಾಧಿಕಾರಿಗಳಾದ ಕೃಪಾ ಅಮರ್ ಆಳ್ವ, ಶಶಿಧರ ಹೆಗ್ಡೆ, ಭಾಸ್ಕರ ಕೆ, ಸಲೀಂ ಅಹ್ಮದ್, ಜೋಕಿಂ, ಗಣೇಶ್ ಪೂಜಾರಿ, ಅಶೋಕ್, ಶುಭೋದಯ ಆಳ್ವ, ಟಿ.ಕೆ.ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.