ಅಲ್ಪಸಂಖ್ಯಾತರ ಶೈಕ್ಷಣಿಕ ಪ್ರವೇಶ ನಿಯಮ ರದ್ದು ಮರು ಪರಿಶೀಲಿಸಲು ಮುಸ್ಲಿಂ ಲೀಗ್ ಮನವಿ

Update: 2024-03-23 12:35 GMT

ಮಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅಲ್ಪಸಂಖ್ಯಾತರ ಶೈಕ್ಷಣಿಕ ಪ್ರವೇಶಕ್ಕೆ ಸಂಬಂಧಿಸಿದ ನಿಯಮ ರದ್ದತಿಯನ್ನು ಮರುಪರಿಶೀಲಿಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಲೀಗ್ ನಿಯೋಗವು ದ.ಕ.ಜಿಲ್ಲಾಡಳಿತ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.

ಈ ಹಿಂದೆ ಅಲ್ಪಸಂಖ್ಯಾತರ ಶಾಲೆಗಳೆಂದು ಘೋಷಿಸಲು ಆ ಶಾಲೆಗಳಲ್ಲಿ ಆಯಾ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶೇ.25ರಷ್ಟು ಆಯಾ ಮತೀಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರಬೇಕು ಮತ್ತು ಉನ್ನತ ಶಿಕ್ಷಣ ಇಲಾಖೆಯಡಿ ಒಟ್ಟು ಪ್ರವೇಶದಲ್ಲಿ ಆಯಾ ಅಲ್ಪಸಂಖ್ಯಾತ ಸಮುದಾಯದ ಕರ್ನಾಟಕಕ್ಕೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆ ಇರಬಾರದು, ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಯ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಶೇ.50ಕ್ಕಿಂತ ಕಡಿಮೆ ಇರಬಾರದು ಎಂದು ನಿಯಮವಿತ್ತು. ಇದರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸಮುದಾಯದ ಮಾಲಕತ್ವದ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಸುಲಭವಾಗುತ್ತಿತ್ತು. ಆದರೆ ರಾಜ್ಯ ಸರಕಾರವು ಅಲ್ಪಸಂಖ್ಯಾತರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಿಸಲು ನಿರ್ದಿಷ್ಟ ಶೇ.ಪ್ರಮಾಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಹೊಂದಿರಬೇಕೆಂಬ ನಿಯಮವನ್ನು ರದ್ದುಪಡಿಸಿರುವುದು ಖಂಡನೀಯ ಎಂದು ತಿಳಿಸಿದೆ.

ಮುಸ್ಲಿಂ ಲೀಗ್ ದ.ಕ. ಜಿಲ್ಲಾಧ್ಯಕ್ಷ ಸಿ.ಅಬ್ದುರ‌್ರಹ್ಮಾನ್ ಮಂಗಳೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್, ಕೋಶಾಧಿಕಾರಿ ರಿಯಾಝ್ ಹರೇಕಳ, ಉಪಾಧ್ಯಕ್ಷರಾದ ಇಸ್ಮಾಯಿಲ್ ಎಚ್. ಬಂದರು ಹಾಗೂ ಕೆ.ಸಿ. ಅಬ್ದುಲ್ ಖಾದರ್ ಕಾವೂರು ಮನವಿ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News