ಮುಸ್ಲಿಮರ ಬದುಕು ಇತರರಿಗೆ ಸ್ಫೂರ್ತಿಯಾಗಬೇಕು: ಮೌಲಾನ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ
ಮಂಗಳೂರು, ಸೆ.27: ಪ್ರವಾದಿ ಮುಹಮ್ಮದ್ (ಸ) ಅವರ ಬೋಧನೆಯಂತೆ ಮುಸ್ಲಿಮರು ಬದುಕು ಸಾಗಿಸಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಆದರೆ ಮುಸ್ಲಿಮರ ಬದುಕಿನ ಶೈಲಿ ಪ್ರವಾದಿಯ ಬೋಧನೆಯಂತಿಲ್ಲ. ಮುಸ್ಲಿಮರು ಯಾರು, ಏನು ಎಂಬುದನ್ನು ಜಗತ್ತು ತಿಳಿಯಬೇಕಿದ್ದರೆ ಇಸ್ಲಾಮಿನ ಪರಿಧಿಯೊಳಗೆ ಮುಸ್ಲಿಮರು ಬದುಕು ಸಾಗಿಸಬೇಕು. ಮುಸ್ಲಿಮರ ಬದುಕಿನ ಶೈಲಿಯು ಇತರರಿಗೆ ಸ್ಫೂರ್ತಿಯಾಗಬೇಕು ಎಂದು ಆಲ್ ಇಂಡಿಯಾ ಪಯಾಮ್ ಇ- ಇನ್ಸಾನಿಯತ್ ಫೋರಂನ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಕಾರ್ಯದರ್ಶಿ, ಲಕ್ನೋದ ನದ್ವತುಲ್ ಉಲಮಾದ ಡೈರೆಕ್ಟರ್ ಮೌಲಾನ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ ಹೇಳಿದರು.
ಮಂಗಳೂರಿನ ಇಖ್ರಾ ಅರಬಿಕ್ ಸ್ಕೂಲ್ ಮತ್ತು ಆಲ್ ಇಂಡಿಯಾ ಪಯಾಮ್ ಇ- ಇನ್ಸಾನಿಯತ್ ಫೋರಂ ನಗರದ ಅತ್ತಾವರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಂಟಿಯಾಗಿ ಆಯೋಜಿಸಿದ ʼಮುಸ್ಲಿಂ ಚಿಂತಕರ ಸಮ್ಮಿಲನʼದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಬೋಧನೆಗಳನ್ನು ಜಗತ್ತಿಗೆ ಪಸರಿಸಲು ಮುಸ್ಲಿಮರು ಇನ್ನಷ್ಟು ಶ್ರಮಿಸಬೇಕಿದೆ. ಭಾರತದಲ್ಲಿ ಮಾಧ್ಯಮಗಳು ಹೆಚ್ಚಾಗಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿವೆ. ಮುಸ್ಲಿಮರ ವಿರುದ್ಧದ ಸನ್ನಿವೇಶವನ್ನು ಸದಾ ಸೃಷ್ಟಿಸುತ್ತಿವೆ. ಅದಕ್ಕೆ ಕೆಲವೊಮ್ಮೆ ಮುಸ್ಲಿಮರೇ ಆಹಾರ ಒದಗಿಸುತ್ತಿರುವ ಘಟನೆಯೂ ನಡೆಯುತ್ತಿದೆ. ಈ ಬಗ್ಗೆ ಆಳವಾಗಿ ಚಿಂತನೆ ಮಾಡಬೇಕಿದೆ. ಮುಸ್ಲಿಮರು ತಮ್ಮ ಕರ್ತವ್ಯ, ಜವಾಬ್ದಾರಿಯನ್ನು ಪರಿಣಾಮ ಕಾರಿಯಾಗಿ ನಿಭಾಯಿಸಬೇಕು ಎಂದು ಮೌಲಾನ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ ಕರೆ ನೀಡಿದರು.
ಇಸ್ಲಾಂ ಮತ್ತು ಪ್ರವಾದಿಯ ಚಿಂತನೆಯನ್ನು ಹರಡುವಲ್ಲಿ ಮದ್ರಸಗಳ ಪಾತ್ರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಉಲಮಾ- ಉಮರಾಗಳು ಕಾರ್ಯಪ್ರವೃತ್ತರಾಗಬೇಕು. ಮುಸ್ಲಿಮರು ತಮ್ಮ ವ್ಯಕ್ತಿತ್ವವನ್ನು ಇಸ್ಲಾಮಿನ ತಳಹದಿಯ ಮೇಲೆ ರೂಪಿಸಬೇಕು. ಎಲ್ಲರಿಗೂ ಆದರ್ಶವಾಗುವಂತಹ ಗುಣಸ್ವಭಾವ ಮುಸ್ಲಿಮರು ಬೆಳೆಸಿಕೊಳ್ಳಬೇಕು. ಮಾನವೀಯತೆ ಮತ್ತು ಸಹಬಾಳ್ವೆಯ ಬದುಕು ಮುಸ್ಲಿಮರದ್ದಾಗಬೇಕು ಎಂದು ಮೌಲಾನ ಸೈಯದ್ ಬಿಲಾಲ್ ಅಬ್ದುಲ್ ಹೈ ಹಸನಿ ನದ್ವಿ ಹೇಳಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಮುಖರಾದ ಮೌಲಾನ ಅಬ್ದುಲ್ ಸುಬಾನ್ ನದ್ವಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇಂತಹ ಸಂದಿಗ್ಧ ಮತ್ತು ಸವಾಲಿನ ಸಂದರ್ಭ ಜನರು ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ಹತಾಶೆಯು ಮುಸ್ಲಿಮರಿಗೆ ಭೂಷಣವಲ್ಲ. ಉತ್ತಮ ಕಾರ್ಯಗಳನ್ನು ಮಾಡುವುದನ್ನು ಮುಂದುವರಿಸಿದರೆ ಸಮುದಾಯ ಮತ್ತು ಸಮಾಜದಲ್ಲಿ ಪ್ರಗತಿ ಕಾಣಲು ಸಾಧ್ಯವಿದೆ ಎಂದು ಮೌಲಾನ ಅಬ್ದುಲ್ ಸುಬಾನ್ ನದ್ವಿ ಅಭಿಪ್ರಾಯಪಟ್ಟರು.
ಮಂಗಳೂರಿನ ಇಖ್ರಾ ಅರಬಿಕ್ ಸ್ಕೂಲ್‌ನ ಪ್ರಾಂಶುಪಾಲ ಮೌಲಾನ ಸಾಲಿಮ್ ಅಲಿ ನದ್ವಿ ಅಧ್ಯಕ್ಷತೆ ವಹಿಸಿದ್ದರು. ಆಲ್ ಇಂಡಿಯಾ ಪಯಾಮ್ ಇ- ಇನ್ಸಾನಿಯತ್ ಫೋರಂನ ಮೌಲಾನ ಜುನೈದ್ ಫಾರೂಕಿ ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರು ಯುನಿಟಿ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ. ಹಬೀಬ್ ರಹ್ಮಾನ್, ಬಬ್ಬುಕಟ್ಟೆಯ ಅಲ್-ಫುರ್ಖಾನ್‌ನ ಪ್ರಾಂಶುಪಾಲ ಮೌಲಾನಾ ಯಹ್ಯಾ ತಂಙಳ್ ಪಾಲ್ಗೊಂಡಿದ್ದರು.
ಮುಹ್ಸಿನ್ ಕೆಂಪಿ ಕಿರಾಅತ್ ಪಠಿಸಿದರು. ಅಲಿ ಅಝಾನ್ ನಾಥ್ ಹಾಡಿದರು. ಮೌಲಾನಾ ಫರ್ಹಾನ್ ನದ್ವಿ ಅವರು ಇಖ್ರಾ ಅರಬಿಕ್ ಸ್ಕೂಲ್ ಮತ್ತು ಆಲ್ ಇಂಡಿಯಾ ಪಯಾಮ್ ಇ- ಇನ್ಸಾನಿಯತ್ ಫೋರಂ ಸಂಘಟನೆಯ ಪರಿಚಯ ಮಾಡಿದರು. ಮುಆದ್ ಟಿ.ಡಿ. ಕಾರ್ಯಕ್ರಮ ನಿರೂಪಿಸಿದರು.