ರಘು ಇಡ್ಕಿದು ಅವರ ‘ಎಲ್ಲವೂ ಬದಲಾಗುತ್ತದೆ’ ಕೃತಿ ಬಿಡುಗಡೆ

Update: 2023-12-21 09:32 GMT

ಮಂಗಳೂರು, ಡಿ.21: ವಿದ್ಯಾಪ್ರಕಾಶನ ಮಂಗಳೂರು ವತಿಯಿಂದ ಸಾಹಿತಿ ರಘು ಇಡ್ಕಿದು ಅವರ 29ನೇ ಕೃತಿ ‘ಎಲ್ಲವೂ ಬದಲಾಗುತ್ತದೆ’ ಬಿಡುಗಡೆ ಸಮಾರಂಭ ಗುರುವಾರ ನಗರದ ಪತ್ರಿಕಾಭವನದಲ್ಲಿ ನಡೆಯಿತು.

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಕೃತಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಪರಿವರ್ತನೆ ಜಗದ ನಿಯಮ ಎಂಬಂತೆ ಕಾವ್ಯ ಹಾಗೂ ಸಾಹಿತ್ಯವೂ ಕಾಲಕಾಕ್ಕೆ ಮಾರ್ಪಾಡನ್ನು ಹೊಂದಿ ಪ್ರಸಕ್ತ ವಿಶೇಷ ಪ್ರಕಾರಗಳನ್ನು ಹೊಂದುತ್ತಿದೆ. ಅದೇ ರೀತಿ ಎಲ್ಲವೂ ಬದಲಾಗುತ್ತದೆ ಎನ್ನುವ ಕವನ ಸಂಕಲನ ಶ್ರೇಷ್ಠ ಮತ್ತು ವಿಭಿನ್ನ ರೀತಿಯಲ್ಲಿ ಮೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೃತಿಗಳು ಲೋಕಾರ್ಪಣೆಯಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜು ಪ್ರಿನ್ಸಿಪಾಲ್ ಪ್ರೊ.ಪಿ.ಕೃಷ್ಣಮೂರ್ತಿ ಮಾತನಾಡಿ, ರಘು ಇಡ್ಕಿದು ಉಪನ್ಯಾಸಕರಾಗಿ, ಅಂಕಣಕಾರರಾಗಿ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವವರು ಮತ್ತು ಪ್ರಯೋಗಶೀಲರು ಆಗಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಲೋಕಕ್ಕೆ ರಘು ಕಾರ್ಯ ಮೆಚ್ಚುವಂತಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ವಹಿಸಿದ್ದರು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಗೋಪಾಕೃಷ್ಣ ಶಾಸಿ, ಪ್ರಕಾಶಕ ವಿದ್ಯಾ ಯು. ಉಪಸ್ಥಿತರಿದ್ದರು.

ಕೃತಿ ರಚನೆಕಾರ, ಸಾಹಿತಿ ರಘು ಇಡ್ಕಿದು ಸ್ವಾಗತಿಸಿದರು. ಎನ್. ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News