ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹ

Update: 2024-02-12 17:21 GMT

ವೇದವ್ಯಾಸ ಕಾಮತ್ - ಮುನೀರ್‌ ಕಾಟಿಪಳ್ಳ

ಮಂಗಳೂರು: ಸೈಂಟ್ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ಧರ್ಮ ನಿಂದನೆ ಮಾಡಿದ್ದರೆ ಅದರ ವಿರುದ್ಧ ಕ್ರಮ ಆಗಲಿ, ಶಿಕ್ಷೆಯೂ ಆಗಲಿ. ಅದಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಕ್ರಮ, ನಿಯಮಗಳಿವೆ. ಆ ಪ್ರಕಾರ ತನಿಖೆ ನಡೆದು ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು ಸರಿಯಾದ ವಿಧಾನ. ಬೀದಿ ನ್ಯಾಯ ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಾದವರಿಗೆ ಈ ಜ್ಞಾನ ಇರಬೇಕು. ಶಾಸಕ ವೇದವ್ಯಾಸ ಕಾಮತ್ ಇದನ್ನೆಲ್ಲ ಧಿಕ್ಕರಿಸಿ ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ಮೆರೆದಿರುವುದು ಆಘಾತಕಾರಿ ವಿಚಾರ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಅದರಲ್ಲೂ ಪ್ರಾಥಮಿಕ ಶಾಲೆಯ ಮುಗ್ಧ ವಿದ್ಯಾರ್ಥಿಗಳನ್ನು ತಮ್ಮದೇ ಶಾಲೆಯ ವಿರುದ್ಧ ಮುತ್ತಿಗೆಗೆ ಬಳಸಿರುವುದು, ಧಾರ್ಮಿಕ ಘೋಷಣೆಗಳನ್ನು ಕೂಗಿಸಿರುವುದು ನಾಚಿಕೆಗೇಡಿನ ಕೃತ್ಯ ಎಂದು ಅಭಿಪ್ರಾಯಿಸಿದ್ದಾರೆ.

ಶಾಸಕನಿಗಿರಬೇಕಾದ ಕನಿಷ್ಠ ಪ್ರಜ್ಞೆ, ಸಮಾಜದ ಭವಿಷ್ಯದ ಕುರಿತು ಕಾಳಜಿ ವೇದವ್ಯಾಸ ಕಾಮತ್‌ ರಿಗೆ ಇಲ್ಲ ಎಂಬುದು ಇಂದಿನ ಘಟನೆಯಿಂದ ಸಾಬೀತಾಗಿದೆ. ಮಂಗಳೂರಿನ ಸಾಮಾನ್ಯ, ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಡೊನೇಷನ್ ಹಾವಳಿ, ದುಬಾರಿ ಫೀಸು, ನಿಯಮ ಬಾಹಿರ ಶಿಕ್ಷಣ ವ್ಯವಸ್ಥೆಯ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತಬೇಕಿದ್ದ ಶಾಸಕರು, ಅದರ ಬದಲಿಗೆ ಅಧಿವೇಶನ ತೊರೆದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು, ಮತೀಯ ಭಾವನೆ ಕೆರಳಿಸಲು ಪ್ರಕರಣವನ್ನು ಬಳಸುತ್ತಿರುವುದು ಖಂಡನೀಯ. ಇದರ ಹಿಂದೆ ಲೋಕಸಭಾ ಚುನಾವಣೆಯ ಸಿದ್ಧತೆ ಇರುವುದು ಸ್ಪಷ್ಟ ಎಂದು ಹೇಳಿದ್ದಾರೆ.

ಜಿಲ್ಲಾಡಳಿತ, ಸರಕಾರ ಇಂತಹ ಗೂಂಡಾಗಿರಿಯನ್ನು ಸಹಿಸಬಾರದು, ಕಾನೂನಿನ ಪಾಠ, ಜವಾಬ್ದಾರಿಯನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕು, ಹಿಂಸೆಗೆ ಪ್ರಚೋದಿಸುವ, ಗೂಂಡಾಗಿರಿ ಮೆರೆದಿರುವ ಶಾಸಕ ವೇದವ್ಯಾಸ ಕಾಮತ್‌ ವಿರುದ್ಧ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News