ಮಂಗಳೂರು ವಿಮಾನ ನಿಲ್ದಾಣ| ಏರ್ ಇಂಡಿಯಾ ಚೆಕ್-ಇನ್ ಸಿಬ್ಬಂದಿಯ ದುರ್ವರ್ತನೆ: ಆರೋಪ

Update: 2024-04-03 13:57 GMT

ಮಂಗಳೂರು: ಏರ್ ಇಂಡಿಯಾ ಚೆಕ್-ಇನ್ ಸಿಬ್ಬಂದಿಯ ದುರ್ವರ್ತನೆಯಿಂದಾಗಿ ಮೂವರು ಪುಟ್ಟ ಮಕ್ಕಳೊಂದಿಗೆ ದುಬೈಗೆ ಹೊರಟಿದ್ದ ಮಹಿಳೆಯೊಬ್ಬರು ಮಂಗಳೂರು ವಿಮಾನ ನಿಲ್ದಾಣದಲ್ಲಿ ತೊಂದರೆ ಅನುಭವಿಸಿರುವುದಾಗಿ ಆರೋಪ ಮಾಡಿದ್ದಾರೆ.

ಈ ಘಟನೆಯಿಂದಾಗಿ ನೊಂದಿರುವ ಮಹಿಳೆಯ ಪತಿ ಮೂಡುಬಿದಿರೆ ನಿವಾಸಿ ಝುಬೈರ್ ಶೇಕ್ ಉಸ್ಮಾನ್ ಸಾಹೇಬ್ ಅವರು ತಮ್ಮ ಕುಟುಂಬ ಅನುಭವಿಸಿದ ಆಘಾತಕಾರಿ ಘಟನೆಗಳನ್ನು ವಿವರಿಸಿ ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.

ಝುಬೈರ್ ಸಾಹೇಬ್ ಅವರ ನೀಡಿರುವ ದೂರಿನಂತೆ ಅವರ ಪತ್ನಿ ಮತ್ತು ಮೂವರು ಮಕ್ಕಳು ಏರ್ ಇಂಡಿಯಾ ಫ್ಲೈಟ್ ಎಐ 680 ಮೂಲಕ ದುಬೈಗೆ ಪ್ರಯಾಣಿಸಲು ಬೆಳಗ್ಗೆ 6:35ಕ್ಕೆ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬೆಳಗ್ಗೆ 7:55 ಕ್ಕೆ ವಿಮಾನ ಹೊರಡಲಿತ್ತು. (ನಂತರ ನಿರ್ಗಮನ 8:00 ಗಂಟೆ ಎಂದು ಮರು ನಿಗದಿಪಡಿಸಲಾಗಿತ್ತು).

ವಿಮಾನದಲ್ಲಿ ಪ್ರಯಾಣಕ್ಕೆ ಮೊದಲು ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಏರ್ ಇಂಡಿಯಾ ಚೆಕ್-ಇನ್ ಸಿಬ್ಬಂದಿ ತಮ್ಮ ಸುಸಜ್ಜಿತ ಬ್ಯಾಗ್‌ನ್ನು ಹೆಚ್ಚುವರಿಯಾಗಿ ಪ್ಯಾಕ್ ಮಾಡುವಂತೆ ಅನಿರೀಕ್ಷಿತವಾಗಿ ನಿರ್ದೇಶಿಸಿದರು ಎಂದು ಝುಬೈರ್‌ ಮಾಹಿತಿ ನೀಡಿದ್ದಾರೆ.

ಅವರು ಸಿಬ್ಬಂದಿ ಹೇಳಿದನ್ನು ಅನುಸರಿಸಿ ಲಗೇಜ್‌ನ್ನು ಪ್ಯಾಕ್ ಮಾಡಿ ಮರಳಿದಾಗ ಅವರಿಗೆ ವಿಮಾನದಲ್ಲಿ ತೆರಳಲು ಅವಕಾಶ ನಿರಾಕರಿಸಲಾಯಿತು ಎಂದು ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಝುಬೈರ್‌ ತಿಳಿಸಿದ್ದಾರೆ.

ಅವರ ವಿಮಾನವು ಮುಂಬೈಗೆ ಸಂಪರ್ಕಿಸುವ ವಿಮಾನವಾಗಿತ್ತು, ಅಲ್ಲಿ ಅವರು ಹಿಡಿಯಲು ಮತ್ತೊಂದು ವಿಮಾನವನ್ನು ಹೊಂದಿದ್ದರು. ಇತರ ಪ್ರಯಾಣಿಕರನ್ನು ಕಳುಹಿಸಲಾಗಿದ್ದರೂ ಝುಬೈರ್ ಕುಟುಂಬಕ್ಕೆ ವಿಮಾನ ಹತ್ತಲು ಅವಕಾಶ ನಿರಾಕರಿಸಲಾಯಿತು ಎಂದು ಆರೋಪ ಮಾಡಿದ್ದಾರೆ.

ಸಿಬ್ಬಂದಿಯ ಅನುಚಿತ ಮತ್ತು ಬೇಜವಾಬ್ದಾರಿಯುತ ವರ್ತನೆಯಿಂದಾಗಿ ಮಕ್ಕಳು ಅನಗತ್ಯವಾಗಿ ಕಣ್ಣೀರು ಹಾಕುವಂತಾಯಿತು. ಇವರಿಗೆ ಟಿಕೆಟ್‌ನ ಹಣ 63,537 ನಷ್ಟ ಆಗಿದ್ದರೂ, ಉಂಟಾದ ಕುಂದುಕೊರತೆಗಳಿಗೆ ಸಂಬಂಧಿಸಿ ಝುಬೈರ್ ಸಾಹೇಬ್ ಪರಿಹಾರಕ್ಕೆ ಮನವಿ ಮಾಡಿದ್ದಾರೆ.

ಆ ದಿನದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಕೋರಿದ್ದಾರೆ. ಇವುಗಳಿಗೆ ಸಂಬಂಧಿಸಿ ಪರಿಶೀಲಿಸಲು ಲಭ್ಯವಿರುವ ದಾಖಲಾತಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಳ್ಳುವಂತೆ ಅವರು ಆಯೋಗವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News