ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆ: ಶಿಕ್ಷಕರ ನೋಂದಣಿಯ ಪರಿಶೀಲನೆ; ಪ್ರೊ. ನಾಗೇಶ್ ಬೆಟ್ಟಕೋಟೆ

Update: 2024-04-03 15:02 GMT

ಮಂಗಳೂರು: ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಶಿಕ್ಷಕರ ನೋಂದಣಿಯ ಪರಿಶೀಲನೆ ನಡೆಯು ತ್ತಿದೆ. ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಯುವ ಪ್ರಕ್ರಿಯೆಯಾಗುತ್ತಿದೆ. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಅದನ್ನು ಹಿಂಪಡೆದ ಬಳಿಕ ಪರೀಕ್ಷೆಯ ದಿನಾಂಕ ನಿಗದಿಪಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ನಾಗೇಶ್ ಬೆಟ್ಟಕೋಟೆ ಹೇಳಿದ್ದಾರೆ.

ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷಾ ಶಿಕ್ಷಕರ ನೋಂದಣಿ ಪರಿಶೀಲನೆ ಬಳಿಕ ಅವರು ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದರು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಂಗೀತ, ನೃತ್ಯ, ತಾಳವಾದ್ಯಗಳ ಪರೀಕ್ಷೆಯು ಗಂಗೂಬಾಯಿ ಹಾನಗಲ್ ವಿವಿಗೆ ಹಸ್ತಾಂತರಗೊಂಡಿದೆ. ಇದು ವಿವಿಯಿಂದ ಮೊದಲ ಬಾರಿಗೆ ನಡೆಸಲ್ಪಡುವ ಜೂನಿಯರ್, ಸೀನಿಯರ್, ಪೂರ್ವವಿದ್ವತ್ ಹಾಗೂ ವಿದ್ವತ್ ಪರೀಕ್ಷೆಯಾಗಲಿದೆ. ಪ್ರಸಕ್ತ ರಾಜ್ಯದ 3,560 ಶಿಕ್ಷಕರು ಹೆಸರು ನೋಂದಾಯಿಸಿದ್ದು, 17,670 ವಿದ್ಯಾರ್ಥಿಗಳು ಸಂಗೀತ, ನೃತ್ಯ ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ಶಿಕ್ಷಕರ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಪೂರೈಸಲಾಗಿದೆ. ದ.ಕ, ಉಡುಪಿ, ಪುತ್ತೂರಿನ 439 ಮಂದಿ ಶಿಕ್ಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಉಳಿದಂತೆ ಮೈಸೂರು, ಹಾಸನ, ಕೊಡಗು, ಮಂಡ್ಯ, ಚಾಮರಾಜ ನಗರ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಂಗಳೂರು, ಧಾರವಾಡ, ಗದಗ್, ಹುಬ್ಬಳ್ಳಿ, ದಾವಣಗೆರೆ, ಹರಿಹರ, ಚಿತ್ರದುರ್ಗ, ಕಲಬುರಗಿ ಸಹಿತ ಕೆಲವು ಜಿಲ್ಲೆಗಳಲ್ಲಿ ಬಾಕಿ ಇದೆ ಎಂದು ಪ್ರೊ. ನಾಗೇಶ್ ಬೆಟ್ಟಕೋಟೆ ಹೇಳಿದರು.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಡಿ ಕಳೆದ ಸಾಲಿನಲ್ಲಿ ಸಂಗೀತ, ನೃತ್ಯ ಪರೀಕ್ಷೆ ಬರೆದು ಫೇಲ್ ಆದವರು ಅಥವಾ ತಪ್ಪುಫಲಿತಾಂಶ ಬಂದರೆ ಅಂತಹವರು ಈಗ ವಿವಿಯಡಿ ಮರು ಪರೀಕ್ಷೆ ಬರೆಯುವುದು ಅನಿವಾರ್ಯ.ಆದರೆ ಅವರ ಪರೀಕ್ಷಾ ಫಲಿತಾಂಶವನ್ನು ಮಂಡಳಿಯ ಹಿಂದಿನ ದಾಖಲೆಗಳು ಪೂರ್ತಿಯಾಗಿ ವಿವಿಗೆ ಹಸ್ತಾಂತರಗೊಂಡ ಬಳಿಕ ಪ್ರಕಟಿಸಲಾಗುವುದು ಎಂದು ಕುಲಪತಿ ಪ್ರೊ. ನಾಗೇಶ್ ಬೆಟ್ಟಕೋಟೆ ಸ್ಪಷ್ಟಪಡಿಸಿದರು.

ಈಗಾಗಲೇ ಗಂಗೂಬಾಯಿ ಹಾನಗಲ್ ವಿವಿ ಜತೆ ರಾಜ್ಯದ ವಿವಿಧ ಜಿಲ್ಲೆಗಳ 43ಕ್ಕಿಂತ ಅಧಿಕ ಸಂಸ್ಥೆಗಳು ಸಂಗೀತ, ನೃತ್ಯ, ಪ್ರದರ್ಶನ ಕಲೆಗಳ ಕಲಿಕೆ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಮಂಗಳೂರಿನಲ್ಲಿ ಸಂಗೀತ, ನೃತ್ಯಕ್ಕೆ ಸಂದೇಶ ಪ್ರತಿಷ್ಠಾನ ಹಾಗೂ ಥಿಯೇಟರ್ ಕಲೆಗೆ ಮಾಂಡ್ ಸೋಭಾಣ್ ಒಪ್ಪಂದ ಮಾಡಿಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News