ಹೈಸ್ಕೂಲ್ ಶಿಕ್ಷಕರ ರಜೆಗೆ ಸರಕಾರಿ ಕತ್ತರಿ ಪ್ರಯೋಗ: ಹರೀಶ್ ಆಚಾರ್ಯ ಖಂಡನೆ

Update: 2024-05-15 15:17 GMT

ಮಂಗಳೂರು: ಜೂನ್- ಜುಲೈಯಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ-2ಕ್ಕೆ ನೋಂದಣಿ ಮಾಡಲು ಇರುವ ವಿದ್ಯಾರ್ಥಿಗಳಿಗೆ ಮೇ 15ರಿಂದ ಜೂ.5ರ ವರೆಗೆ ಆಯಾ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(ಕೆಎಸ್‌ಇಎಬಿ) ತರಾತುರಿಯಲ್ಲಿ ನಿರ್ದೇಶನ ನೀಡುವ ಮೂಲಕ ಶಿಕ್ಷಕರಿಗೆ ರಜೆಯ ವಿಚಾರದಲ್ಲಿ ಅನ್ಯಾಯ ಮಾಡಿರುವುದು ಖಂಡನೀಯ ಎಂದು ಮಂಗಳೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್. ಹರೀಶ್ ಆಚಾರ್ಯ ಹೇಳಿದ್ದಾರೆ.

ಸೇವಾ ನಿಯಮಗಳ ಪ್ರಕಾರ ಶಿಕ್ಷಕರಿಗೆ ಬೇಸಿಗೆ ರಜೆ ನೀಡಿರುವ ಸರಕಾರವೇ ಈಗ ಏಕಾಏಕಿ ವಿಶೇಷ ತರಗತಿಯನ್ನು ನಡೆಸಲು ಶಾಲೆಗೆ ಬನ್ನಿ ಎಂದು ಆದೇಶ ನೀಡುವುದು ಯಾವ ನ್ಯಾಯ. ಮಕ್ಕಳಂತೆ ಶಿಕ್ಷಕರೂ ತಮ್ಮ ಕುಟುಂಬದ ಜತೆಗೆ ರಜೆಯಲ್ಲಿ ಹೋಗಿರುತ್ತಾರೆ. ಮಂಗಳವಾರ(ಮೇ 15ರಂದು) ಸಂಜೆ ಏಕಾಏಕಿ ಕೆಎಸ್‌ಇಎಬಿ ಅವರು ನಿರ್ದೇಶನ ನೀಡುವ ಮೂಲಕ ಶಿಕ್ಷಕರ ರಜೆಗೆ ಕತ್ತರಿ ಹಾಕಿರೋದು ಸರಿಯಲ್ಲ ಎಂದು ಹೇಳಿದ್ದಾರೆ.

ಸರಕಾರ ಮೊದಲೇ ನಿಗದಿಪಡಿಸಿದಂತೆ ಶಾಲೆಗಳು ಅಧಿಕೃತವಾಗಿ ಆರಂಭವಾಗಲು ಇನ್ನೂ 14 ದಿನಗಳ ಸಮಯಾವ ಕಾಶವಿದೆ. ಬೇಸಿಗೆ ರಜೆಯ ಈ ಹಿಂದಿನ ತಿಂಗಳ ಅವಧಿ ಲೋಕಸಭಾ ಚುನಾವಣೆಯ ಕರ್ತವ್ಯದಲ್ಲೇ ಕಳೆದುಹೋಗಿದೆ. ಈಗ ಸಿಕ್ಕಿರುವ ರಜೆಯನ್ನೂ ಕಡಿತಗೊಳಿಸಿ ಶಿಕ್ಷಕರು ಶಾಲೆಗಳಿಗೆ ಆಗಮಿಸುವಂತೆ ಸೂಚನೆ ನೀಡಿರುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.ಶಿಕ್ಷಕರ ಹಕ್ಕಿನ ರಜೆಯನ್ನು ಇಳಿಸುವ ಮೂಲಕ ಅವರಿಗೆ ಅನ್ಯಾಯ ಮಾಡಲಾಗಿದೆ ಇದು ಖಂಡನೀಯ ವಿಚಾರ ಎಂದು ಅವರು ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News