ಸಿಆರ್‌ಝೆಡ್ ನಿಯಮ ಉಲ್ಲಂಘನೆ ಆರೋಪ: ಕಾಮಗಾರಿ ತಡೆಗೆ ಎನ್‌ಇಸಿಎಫ್‌ನಿಂದ ರಾಜ್ಯ ಸರಕಾರಕ್ಕೆ ಪತ್ರ

Update: 2024-05-16 13:40 GMT

ಮಂಗಳೂರು: ನೇತ್ರಾವತಿ ಜಲಾಭಿಮುಖ ಯೋಜನೆ (ವಾಟರ್ ಫ್ರಂಟ್)ಗೆ ಸಂಬಂಧಿಸಿ ಮಂಗಳೂರು ಸ್ಮಾಟ್ ಸಿಟಿ ಲಿಮಿಟೆಡ್ (ಎಂಎಸ್‌ಸಿಎಲ್)ನಿಂದ ಸಿಆರ್‌ಝೆಡ್ ಕಾನೂನು ಉಲ್ಲಂಘಿಸಲಾಗಿದೆ. ಯೋಜನೆಗಾಗಿ ನದಿಗೆಮಣ್ಣು ತುಂಬಿಸುವ ಹಾಗೂ ನದಿ ದಡದಲ್ಲಿ ಸಿಆರ್‌ಝೆಡ್ ಕಾನೂನಿಗೆ ವಿರುದ್ಧವಾಗಿ ಕಾಂಡ್ಲಾ ಮರಗಳನ್ನು ಕಡಿದು ಶಾಶ್ವತ ಗೋಡೆ ಕಟ್ಟುವ ಕಾರ್ಯವನ್ನು ಎಂಎಸ್‌ಸಿಎಲ್‌ನಿಂದ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ತಡೆದು ಸೂಕ್ಷ್ಮ ಕಾಂಡ್ಲಾಮರಗಳ ಪ್ರದೇಶವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ರಾಜ್ಯ ಸರಕಾರದ ಪರಿಸರ ಹಾಗೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ನೇತ್ರಾವತಿ ನದಿಗೆ ತಾಗಿಕೊಂಡು ಮೋರ್ಗನ್ಸ್ ಗೇಟ್‌ನ ಜೆಎಚ್ ಮೋರ್ಗನ್ ಟೈಲ್ ಫ್ಯಾಕ್ಟರಿಯ ಹಿಂದುಗಡೆ ಎಂಎಸ್‌ಸಿಎಲ್‌ನಿಂದ ಕಾಮಗಾರಿ ನಡೆಯುತ್ತಿದೆ. ಚೆನ್ನೈನ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (ಎನ್‌ಜಿಟಿ)ನಡಿ ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿರುವ ನಡುವೆಯೇ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪತ್ರದಲ್ಲಿ ಎನ್‌ಇಸಿಎಫ್ ವಿವರಿಸಿದೆ.

ಈ ಅಕ್ರಮ ಕಾಮಗಾರಿಯು ಪರಿಸರಕ್ಕೆ ಪೂರಕವಾದ ಕಾಂಡ್ಲಾ ಮರಗಳ ವಿನಾಶದ ಜತೆಗೆ ನೇತ್ರಾವತಿ ನದಿಯ ಹರಿವಿಗೂ ಬಾಧಕ. ನದಿಯ ಮೇಲೆ ಇನ್ನಷ್ಟು ದೌರ್ಜನ್ಯವೆಸಗಿ ಪರಿಸರಕ್ಕೆ ತೊಂದರೆ ಆಗುವ ಮೊದಲು ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಎನ್‌ಇಸಿಎಫ್‌ನ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರು ಬರೆದಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ೨.೧ ಉದ್ದದ ಸೈಕಲ್ ಮತ್ತು ಪಾತ್‌ವೇ ರಸ್ತೆಗಾಗಿ ಸುಮಾರು 71 ಕೋಟಿರೂ.ಗಳ ಯೋಜನೆ ಇದಾಗಿದೆ. ಈ ಯೋಜನೆ ಆರಂಭವಾದಾಗಿನಿಂದ ಸ್ಥಳೀಯರು ಮತ್ತು ಪರಿಸರವಾದಿಗಳಿಂದ ತೀವ್ರ ಹೋರಾಟ, ಪ್ರತಿಭಟನೆಗಳ ಹೊರತಾಗಿಯೂ ಇಲ್ಲಿ ಕಾಮಗಾರಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News