ಕೋಮು ಪ್ರಚೋದಕ ಕೃತ್ಯಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು, ಸಂಘಟನೆಗಳ ಜಂಟಿ ವೇದಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Update: 2024-06-10 10:41 GMT

ಮಂಗಳೂರು, ಜೂ.10: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದ.ಕ. ಜಿಲ್ಲೆಯಲ್ಲಿ ಕೋಮುವಾದಿ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಕೋಮುದ್ವೇಷ ಕೆರಳಿಸುವ, ಕೋಮುವಾದಿ ಚಟುವಟಿಕೆಗಳು ಮುಂದುವರಿದಿದ್ದು, ಇಂತಹ ಘಟನೆಗಳು ನಡೆಯದಂತೆ ಯೋಜನಾಬದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು, ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಈ ಬಗ್ಗೆ ವೇದಿಕೆಯ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಚಿವ ದಿನೇಶ್ ಗುಂಡೂರಾವ್ರಿಗೆ ಮನವಿ ಸಲ್ಲಿಸಲಾಯಿತು.

ವಾರಗಳ ಹಿಂದೆ ಮಸೀದಿಯಲ್ಲಿ ಜಾಗ ಸಾಲದೆ ಮುಂಭಾಗದ ರಸ್ತೆ ಬದಿ ನಮಾಝ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಮತೀಯ ಗಲಭೆಗೆ ಪ್ರಜೋದಿಸುವ ಮಾತುಗಳನ್ನಾಡಿದ ಶರಣ್ ಪಂಪ್ ವೆಲ್ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತ್ತು. ಆದರೆ ಈ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಜೆರೋಸಾ ಶಾಲೆಯ ಎದುರು ನಡೆದ ಕೋಮು ಪ್ರಚೋದಕ ಪ್ರಕರಣದಲ್ಲೂ ಹೈಕೋರ್ಟ್ನಲ್ಲಿ ತಡೆ ಸಿಕ್ಕಿದೆ. ಪದೇ ಪದೇ ಈ ರೀತಿ ನಡೆಯುತ್ತಿರುವುದು ಕೋಮು ಪ್ರಚೋದಕ ಕೃತ್ಯಗಳ ಮೇಲಿನ ಪೊಲೀಸ್ ಇಲಾಖೆಯ ಕಾನೂನು ಕ್ರಮಗಳನ್ನು ಪ್ರಹಸನಕ್ಕೆ ಒಳಪಡಿಸಿದೆ. ಸಮಾಜದ ಶಾಂತಿ ಕದಡುವ ಗಂಭೀರ ಪ್ರಕರಣಗಳಲ್ಲಿ ಪೊಲೀಸರು ಹೂಡುವ ಪ್ರಕರಣಗಳಿಗೆ ಸುಲಭದಲ್ಲಿ ತಡೆ ಸಿಗಲು ಸಾಧ್ಯವಾಗುವುದು ಹೇಗೆ, ಪೊಲೀಸರು ಹಾಕುವ ಎಫ್ ಐ ಆರ್ ದುರ್ಬಲವೇ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ವಿಜಯೋತ್ಸವದ ನೆಪದಲ್ಲಿ ಮುಸ್ಲಿಮರನ್ನು ಕೆರಳಿಸಿ ಕೋಮು ಉದ್ವಿಗ್ನತೆ ಮೂಡಿಸಲು ಜಿಲ್ಲೆಯಲ್ಲಿ ವ್ಯವಸ್ಥಿತ ಸಂಚು ನಡೆಯುತ್ತಿದೆ. ನಿಷೇಧಾಜ್ಞೆ ಇರುವಾಗಲೇ ಕರೋಪಾಡಿ ಮಸೀದಿಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಅಕ್ರಮ ಕೂಟ ಸೇರಿ ವಿಜಯೋತ್ಸವ ಆಚರಿಸಿ ಪ್ರಚೋದಕ ಘೋಷಣೆಗಳನ್ನು ಕೂಗಿದ್ದಾರೆ. ಪ್ರಧಾನಿ ಪದಗ್ರಹಣದ ಸಂದರ್ಭ ಬೋಳಿಯಾರ್ ಮಸೀದಿಯ ಮುಂಭಾಗದಲ್ಲಿ ಉದ್ದೇಶಪೂರ್ವಕವಾಗಿ ಗುಂಪು ಸಂಭ್ರಮಾಚರಣೆ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿಯಾಗಿ ವರ್ತಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮ ವಹಿಸಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಯೋಜನಾಬದ್ಧ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News