ರಾಜ್ಯ ಸರಕಾರದಿಂದ ಜನರ ರಕ್ತ ಹೀರುವ ಪ್ರಯತ್ನ: ಶಾಸಕ ಡಾ.ಭರತ್ ಶೆಟ್ಟಿ ಆರೋಪ

Update: 2024-06-19 10:29 GMT

ಮಂಗಳೂರು, ಜೂ.19: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನರ ರಕ್ತ ಹೀರುವ ಪ್ರಯತ್ನ ಮಾಡುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಆರೋಪಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೆಲೆ ಏರಿಕೆಯನ್ನು ವಿರೋಧಿಸಿ ಎಲ್ಲ ಮಂಡಲ ವ್ಯಾಪ್ತಿಯಲ್ಲಿ ಜೂ.20ರಂದು ರಾಸ್ತಾ ರೋಕೋ ಪ್ರತಿಭಟನೆ ಆಯೋಜಿಸಲಾಗಿದೆ. ತಮ್ಮ ವಿಧಾನಸಭಾ ವ್ಯಾಪ್ತಿಯ ಕೂಳೂರಿನಲ್ಲಿ ಸಂಜೆ 4 ಗಂಟೆಗೆ ರಾಸ್ತಾ ರೋಕೋ ನಡೆಯಲಿದೆ ಎಂದರು.

ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಮಂಡಲ ಮಟ್ಟದ ಪ್ರತಿಭಟನೆಯ ಬಳಿಕವೂ ಬೆಲೆ ಏರಿಕೆ ಹಿಂಪಡೆಯದಿದ್ದರೆ ಮುಂದೆ ಮತ್ತಷ್ಟು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅವರು ಹೇಳಿದರು.

ರಾಜ್ಯದ ಖಜಾನೆ ಖಾಲಿ ಆಗಿದೆ ಎಂದು ಆರೋಪಿಸಿದ ಡಾ.ಭರತ್ ಶೆಟ್ಟಿ, ಸರಕಾರದ ಆ್ಯಂಬುಲೆನ್ಸ್ ಚಾಲಕರಿಂದ ಹಿಡಿದು ಜಲ ಮಂಡಳಿ ಅಧಿಕಾರಿಗಳಿವರೆಗೆ ವೇತನ ನೀಡಲು ಸರಕಾರದ ಬಳಿ ಹಣವಿಲ್ಲ.ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 490 ಹತ್ಯೆಗಳು, 198 ಅತ್ಯಾಚಾರ ಪ್ರಕರಣ ದಾಖಲಾಗುವ ಮೂಲಕ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಹಿಂದಿನ ಸರಕಾರ ಪೆಟ್ರೋಲ್ ಡೀಸೆಲ್ ನ ಸೆಸ್ ಒಂದು ರೂ. ಹೆಚ್ಚು ಮಾಡಿದಾಗ ಸಿದ್ದರಾಮಯ್ಯ ಅಂದು ಇದರಿಂದ ಜನಸಾಮಾನ್ಯರ ಬದುಕು ಹಾಳಾಗುತ್ತದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದು ಭಾಷಣ ಬಿಗಿದಿದ್ದರು. ಆದರೆ ಇದೀಗ ಅವರೇ 3 ರೂ. ಏರಿಕೆ ಮಾಡಿದ್ದಾರೆ ಎಂದರು.

ಬೆಂಗಳೂರಿನಲ್ಲಿ 25000 ಎಕರೆ ಸರಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್ ಗಳಿಗೆ ಮಾರಾಟಕ್ಕೆ ಸರಕಾರ ಮುಂದಾಗಿದೆ. ಕಳೆದ ಒಂದು ವರ್ಷದಿಂದ ಸರಕಾರದಿಂದ ಯಾವುದೇ ಅನುದಾನ ಶಾಸಕರಿಗೆ ಬಿಡುಗಡೆಯಾಗುತ್ತಿಲ್ಲ. ಇದರಿಂದ ಒಂದು ಶಿಲಾನ್ಯಾಸ ನೆರವೇರಿಸಲೂ ಸಾಧ್ಯವಾಗುತ್ತಿಲ್ಲ ಎಂದು ಡಾ.ಭರತ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜೇಶ್ ಕೊಟ್ಟಾರಿ, ಕಿಶೋರ್ ಪುತ್ತೂರು, ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News