ನ್ಯಾಯಾಧೀಶರಿಗೆ ಅಗೌರವ ಆರೋಪ: ಸುಳ್ಯ ಆಸ್ಪತ್ರೆಯ ವೈದ್ಯರ ವಿರುದ್ಧ ದೂರು

Update: 2024-09-23 17:02 GMT

ಸುಳ್ಯ: ಕಾಸರಗೋಡಿನ ದೇಲಂಪಾಡಿಯ ಮಹಿಳೆಯೋರ್ವರು ಆತ್ಮಹತ್ಯೆ ಯತ್ನ ನಡೆಸಿದ್ದು ಆ ಮಹಿಳೆಯ ಹೇಳಿಕೆ ಪಡೆಯುವ ಉದ್ದೇಶದಿಂದ ಆದೂರು ಪೊಲೀಸ್ ಅಧಿಕಾರಿಗಳ ಜೊತೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದಿದ್ದ ಕಾಸರಗೋಡು ಜಿಲ್ಲಾ ನ್ಯಾಯಾಧೀಶರೊಡನೆ ಆಸ್ಪತ್ರೆಯ ವೈದ್ಯರೊಬ್ಬರು ಅಗೌರವವಾಗಿ ನಡೆದುಕೊಂಡರೆಂದು ನ್ಯಾಯಾಧೀಶರು ದೂರು ನೀಡಿದ್ದಾರೆ.

ದೇಲಂಪಾಡಿಯಲ್ಲಿ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಅವರನ್ನು ಶನಿವಾರ ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು. ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದವರ ಹೇಳಿಕೆಯನ್ನು ಜಿಲ್ಲಾ ನ್ಯಾಯಾಧೀಶರು ಹೋಗಿ ಪಡೆಯಬೇಕಿರುವುದರಿಂದ ಕಾಸರಗೋಡು ಜಿಲ್ಲಾ ನ್ಯಾಯಾಧೀಶರಾದ ಅಬ್ದುಲ್ ಬಾತಿಷ್ ಸೆ.21 ರಂದು ರಾತ್ರಿ ಸುಳ್ಯ ಆಸ್ಪತ್ರೆಗೆ ಬಂದರು. ನ್ಯಾಯಾಧೀಶರು ಬರುವಾಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಿರಿಯ ವೈದ್ಯರಾಗಿದ್ದ ಡಾ.ವಿನ್ಯಾಸ್ ಕರ್ತವ್ಯದಲ್ಲಿದ್ದರು. ನ್ಯಾಯಾಧೀಶರು ಬಂದು ವಿಚಾರಿಸಿ ಮಾಹಿತಿ ಕೇಳಿದಾಗ ಹಿರಿಯ ಡಾಕ್ಟರ್ ಬರಬೇಕು. ಅವರೇ ಮಾಹಿತಿ ನೀಡಬೇಕಿದೆ ಎಂದು ಹೇಳಿದರು. ಈ ವೇಳೆಯಲ್ಲಿ ಆಗಮಿಸಿದ ಹಿರಿಯ ವೈದ್ಯೆ ಡಾ.ಸೌಮ್ಯ ರವರು ನ್ಯಾಯಾಧೀಶರಿಗೆ ಮಾಹಿತಿ ನೀಡಲು ನಿರಾಕರಿಸಿದರೆನ್ನಲಾಗಿದೆ. ನೀವು ಲಿಖಿತವಾಗಿ ವಿನಂತಿ ನೀಡಿದರೆ ಮಾತ್ರ ಕೊಡಲು ಸಾಧ್ಯ ಎಂದು ಅವರು ತಿಳಿಸಿದರು. ಅಸ್ಪತ್ರೆಗೆ ನ್ಯಾಯಾಧೀಶರು ಬರುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೂ ಮಾಹಿತಿ ನೀಡದೆ ಅಗೌರವದಿಂದ ನಡೆಸಿಕೊಂಡಿದ್ದಾರೆ ಮತ್ತು ಉದ್ದಟತನ ತೋರಿದ್ದಾರೆಂದು ನ್ಯಾಯಾಧೀಶರಾದ ಅಬ್ದುಲ್ ಬಾಷಿತ್ ಅವರು ಸುಳ್ಯ ಪೊಲೀಸ್ ಠಾಣೆಗೆ ಬಂದು ವೈದ್ಯರುಗಳ ವಿರುದ್ಧ ದೂರು ನೀಡಿದರು. ಬೆಳಿಗ್ಗೆವರೆಗೆ ಪೊಲೀಸ್ ಠಾಣೆಯಲ್ಲಿ ಕಾದು ಕುಳಿತು ಕೇಸು ದಾಖಲಾದ ಬಗೆಗಿನ ದಾಖಲೆ ಪಡೆದುಕೊಂಡು ನ್ಯಾಯಾಧೀಶರು ಕಾಸರಗೋಡಿಗೆ ತೆರಳಿದರು. ಇಬ್ಬರು ವೈದ್ಯರ ವಿರುದ್ಧ ಕೇಸು ದಾಖಲಿಸಿಕೊಂಡ ಸುಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News