ಸುಳ್ಯ: ಯುವಕನಿಗೆ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2024-09-23 17:18 GMT

ಸುಳ್ಯ: ಬಸ್ಸಿನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾದ ಯುವಕನಿಗೆ ಸುಳ್ಯದಲ್ಲಿ ತಂಡವೊಂದು ಹಲ್ಲೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವರ್ಷಿತ್ ಚೊಕ್ಕಾಡಿ ಹಾಗೂ ಮಿಥುನ್ ಸುಳ್ಯ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡಿನ ಅಬ್ದುಲ್ ನಿಯಾಝ್ (22) ಹಲ್ಲೆಗೊಳಗಾದ ಯುವಕ. ಬೆಂಗಳೂರಿನಿಂದ ಸುಳ್ಯಕ್ಕೆ ಬರುವ ಬಸ್ಸಿಗೆ ಸುಳ್ಯದಲ್ಲಿ ಡಿಪ್ಲೋಮ ಕಲಿಯುತ್ತಿರುವ ಸಕಲೇಶಪುರದ ವಿದ್ಯಾರ್ಥಿನಿ ಹತ್ತಿದ್ದು, ಬಸ್ಸಿನಲ್ಲಿ ನಿಯಾಝ್ ಹತ್ತಿರ ಕುಳಿತ್ತಿದ್ದಾರೆ. ಈ ವೇಳೆ ನಿಯಾಝ್ ಮೈಮುಟ್ಟಿ ಆಕೆಯೊಡನೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ವಿಚಾರದ ಬಗ್ಗೆ ವಿದ್ಯಾರ್ಥಿನಿ ಬಸ್ ನಿರ್ವಾಹಕ ಹಾಗೂ ಬಸ್ಸಿನಲ್ಲಿದ್ದವರಿಗೆ ತಿಳಿಸಿದ್ದು, ಅವರು ಯುವಕನ ನಡೆಯನ್ನು ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡಿದ್ದರು. ನಂತರ ವಿದ್ಯಾರ್ಥಿನಿ ಸುಳ್ಯದ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಯುವಕ ಸುಬ್ರಹ್ಮಣ್ಯದಲ್ಲಿ ಬಸ್ಸಿನಿಂದ ಇಳಿದು ಬೇರೊಂದು ಬಸ್ಸಿನಲ್ಲಿ ಸುಳ್ಯಕ್ಕೆ ಆಗಮಿಸಿದ್ದು, ಸುಳ್ಯದ ಪೈಚಾರ್ ಎಂಬಲ್ಲಿ ಇಳಿದಿದ್ದಾನೆ. ಈ ವೇಳೆ ಅಲ್ಲಿದ್ದ ಯುವಕರು ಆರೋಪಿ ಯುವಕನನ್ನು ಹಿಡಿದು ಕಾರಲ್ಲಿ ಕಿಡ್ನಾಪ್ ಮಾಡಿ ಸುಳ್ಯದ ಬಸ್ ನಿಲ್ದಾಣ ಸಮೀಪ ಕರೆತಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡ ನಿಯಾಝ್ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕಾಸರಗೋಡಿನ ಮುಳ್ಳೇರಿಯಾ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುಳ್ಯ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಬಸ್ಸಿನಲ್ಲಿ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆಂದು ಅಬ್ದುಲ್ ನಿಯಾಝ್ ವಿರುದ್ಧ ವಿದ್ಯಾರ್ಥಿನಿ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮೇಲೆ ತಂಡದಿಂದ ಹಲ್ಲೆ, ಕೊಲೆ ಯತ್ನ ನಡೆದಿದೆ ಎಂದು ಅಬ್ದುಲ್ ನಿಯಾಝ್ ಸುಳ್ಯ ಠಾಣೆಗೆ ದೂರು ನೀಡಿದ್ದು, ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಎಡಿಷನಲ್ ಎಸ್ಪಿ ರಾಜೇಂದ್ರ, ಡಿವೈಎಸ್ಪಿ ಅರುಣ್‍ ನಾಗೇಗೌಡ, ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸ್‍ಐಗಳಾದ ಸಂತೋಷ್, ಈರಯ್ಯ ಮತ್ತಿತರ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News