ಯೆನೆಪೊಯ ಕೂಳೂರು ಕ್ಯಾಂಪಸ್ ನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ

Update: 2024-10-20 16:11 GMT

ಮಂಗಳೂರು: ಯೆನೆಪೊಯ ಪರಿಗಣಿತ ವಿವಿಯ ಮುಂದಾಳತ್ವದಲ್ಲಿ ಯೆನೆಪೊಯ ವಿದ್ಯಾ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ 10ನೇ ಘಟಕ ಮತ್ತು ರಾಜ್ಯ ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಹಯೋಗದಲ್ಲಿ "ವಾಲಂಟ್ರೀಸ್‌ ಟು ಲೀಡರ್ಸ್:‌ ಲೈಫ್‌ ಸ್ಕಿಲ್ಸ್‌ ಫಾರ್‌ ಸಕ್ಸೆಸ್‌" ರಾಜ್ಯ ಮಟ್ಟದ ಕಾರ್ಯಾಗಾರವು ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಇದರ ಕೂಳೂರು ಕ್ಯಾಂಪಸ್ ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಟ್ರೈನಿಂಗ್‌ ಮತ್ತು ಅಡ್ಮಿನಿಸ್ಟ್ರೇಷನ್‌ ಫಾರ್ಮೆಡ್ ಲಿಮಿಟೆಡ್ ಬೆಂಗಳೂರು ಇದರ ಎಚ್‌ಆರ್‌ ಹಾಗೂ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಶಸ್ಸು ಎಂಬುದು ರೈಲು, ಆತ್ಮವಿಶ್ವಾಸ ಅದರ ಇಂಜಿನ್ ಇದ್ದಂತೆ. ವಿದ್ಯೆಗೆ ವಿನಯವೇ ಪ್ರಮುಖವಾಗಿದ್ದು, ಇದನ್ನು ರಾಷ್ಟ್ರೀಯ ಯೋಜನೆ ಕಲಿಸುತ್ತದೆ. ಎನ್ಎಸ್ಎಸ್ ಎಂದರೆ ಮಣ್ಣು ಕೆತ್ತುವ, ಮೆತ್ತುವ ಕೆಲಸವಲ್ಲ. ಇದು ಆತ್ಮ‌ವಿಶ್ವಾಸದ ನಾಯಕರನ್ನು ಹುಟ್ಟು ಹಾಕುವ ಪ್ರಕ್ರಿಯೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಅಂಡ್ ಮ್ಯಾನೇಜ್‌ ಮೆಂಟ್ ನ ಪ್ರಾಂಶುಪಾಲರಾದ ಪ್ರಾಂಶುಪಾಲ ಪ್ರೊ. ಅರುಣ್ ಎ. ಭಾಗವತ್, ಇಂದಿನ ಕಾರ್ಯಾಗಾರಗಳು ಒಬ್ಬ ವ್ಯಕ್ತಿ ನಾಯಕನಾಗಿ ಬೆಳೆಯಲು ಬೇಕಾಗಿರುವ ಎಲ್ಲ ಸ್ತರದ ಮಾರ್ಗದರ್ಶನ ನೀಡಲಿದೆ. ನಾಯಕತ್ವದ‌ ಜೊತೆಗೆ ಸಮಾಜದಲ್ಲಿ ಬೆರೆಯುವುದನ್ನು ಕಲಿಸಲಿದೆ. ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಹೆಚ್ಚು ವಿಚಾರಗಳನ್ನು ವಿನಿಮಯ ಮಾಡಿಕೊಂಡು ಅರಿಯ ಬೇಕು. ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಅದು ನಿಮ್ಮನ್ನು ನಾಯಕನಾಗಿ ಬೆಳೆಸುತ್ತದೆ ಎಂದು ನುಡಿದರು.

ಯೆನೆಪೋಯ ಪರಿಗಣಿತ ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕಿ ಡಾ. ಅಶ್ವಿನಿ ಶೆಟ್ಟಿ ಮಾತನಾಡಿದರು. ಸಮಾರಂಭದಲ್ಲಿ ಟ್ರೈನಿಂಗ್‌ ಮತ್ತು ಅಡ್ಮಿನಿಸ್ಟ್ರೇಷನ್‌ ಫಾರ್ಮೆಡ್ ಲಿಮಿಟೆಡ್ ಬೆಂಗಳೂರು ಇದರ ಎಚ್‌ ಆರ್‌ ಹಾಗೂ ಹಿರಿಯ ಕಾರ್ಯಕಾರಿ ಉಪಾಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಅವರು "ಎನ್‌ಎಸ್‌ಎಸ್ ಸ್ವಯಂಸೇವಕರನ್ನು ಸಬಲೀ ಕರಣಗೊಳಿಸುವುದು: ನಾಯಕತ್ವದ ಶ್ರೇಷ್ಠತೆʼ ವಿಷಯದ ಕುರಿತು ಹಾಗೂ ಲೀಮಿಂಗ್ ಮತ್ತು ಡೆವಲಪ್‌ ಮೆಂಟ್‌ ಫಾರ್ಮೆಡ್ ಲಿಮಿಟೆಡ್ ಬೆಂಗಳೂರು ಇದರ ಉಪಾಧ್ಯಕ್ಷ ವಿಕ್ರಮ್ ಸಾಗರ್ ಸಕ್ಸೇನಾ ಅವರು "ಯಶಸ್ಸಿಗೆ ಜೀವನ ಕೌಶಲ್ಯಗಳು: ಎನ್ಎಸ್ಎಸ್ ದೃಷ್ಟಿಕೋನʼ ವಿಷಯಗಳ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ಸಮಾರಂಭದಲ್ಲಿ ಡಾ. ಸಕೀನಾ ನಾಸಿರ್, ಎನ್ಎಸ್ಎಸ್ ಕಾರ್ಯಕ್ರಮ ಆಯೋಜನಾಧಿಕಾರಿ ಅಬ್ದುಲ್ ರಶೀದ್ ಕೆ.ಎಂ., ವಿದ್ಯಾರರ್ಥಿ ನಾಯಕರಾದ ಝುಲ್ಪಿಕರ್ ಅಲಿ, ಸಿನ್ವಿ ಮೆಹಬೂಬ ಮೊದಲಾದವರು ಉಪಸ್ಥಿತರಿದ್ದರು. ಯೆನಪೊಯ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಸಲೀಮ್ ಅಹ್ಮದ್ ಪ್ರಾರ್ಥಿಸಿದರು. ಸಿನ್ವಿ ಮೆಹಬೂಬ ಮತ್ತು ತಂಡದವರು ಎನ್ಎಸ್ಎಸ್ ಧ್ಯೇಯ ಗೀತೆ ಹಾಡಿದರು. ಉಪನ್ಯಾಸಕಿ ಸಾಕ್ಷ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ನಾಯಕ ಝುಲ್ಪಿಕರ್ ಅಲಿ ಧನ್ಯವಾದ ಸಮರ್ಪಿಸಿದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News