ಬೆಂಗ್ರೆ ನಿವಾಸಿಗಳಿಗೆ ಸರ್ವೆ ನಂಬರ್ ನಮೂದಿಸಿ ಹಕ್ಕು ಪತ್ರ ವಿತರಣೆ
ಮಂಗಳೂರು: ಬೆಂಗ್ರೆ ಪ್ರದೇಶದ 9 ಮಂದಿಗೆ ಸರ್ವೆ ನಂಬ್ರ ನಮೂದಿಸಿ ಹಕ್ಕುಪತ್ರವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ತಮ್ಮ ಕಚೇರಿಯಲ್ಲಿ ವಿತರಿಸಿದರು.
ಬೆಂಗ್ರೆ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಬೆಂಗ್ರೆ, ಅಬೂಬಕರ್ ಅಶ್ರಫ್,ಶಾಂತಲಾ ಗಟ್ಟಿ, ಫಯಾಜ್ ಬೆಂಗ್ರೆ ಮುಂತಾದವರುಗಳು ಉಪಸ್ಥಿತರಿದ್ದರು.
ಬಂಗ್ರೆ ಪ್ರದೇಶದಲ್ಲಿ ಸುಮಾರು 450ಕ್ಕೂ ಅಧಿಕ ಮಂದಿಗೆ ಸರ್ವೆ ನಂಬ್ರ ನಮೂದಿಸಿ ಹಕ್ಕು ಪತ್ರ ನೀಡಲು ಬಾಕಿ ಇದೆ. ಕೇವಲ ಜೆಎಂಜೆ ಆಧಾರದಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿದ್ದರೂ, ಕಾನೂನುಬದ್ಧವಾಗಿ ಸರ್ವೆ ನಂಬ್ರ ನಿಗದಿಪಡಿಸದೇ ಇದ್ದುದರಿಂದ, ಅನೇಕ ವರ್ಷಗಳಿಂದ ಸರಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಫಲಾನುಭವಿಗಳು ತೊಂದರೆ ಎದುರಿಸುತ್ತಿದ್ದಾರೆ.
ಬಾಕಿ ಉಳಿದಿರುವ ನಿವಾಸಿಗಳಿಗೆ ಸರ್ವೆ ನಂಬ್ರವನ್ನು ನಮೂದಿಸಿ, ಹಕ್ಕುಪತ್ರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಆಗ್ರಹಿಸಿದ್ದರು.
3 ತಿಂಗಳಗೊಳಗಾಗಿ ಬೆಂಗ್ರೆಯಲ್ಲಿ ವಾಸವಾಗಿರುವ ಎಲ್ಲಾ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದರು.