ಮಂಗಳೂರು: ಟೆಲಿಗ್ರಾಂ ಸಂದೇಶ ನಂಬಿ ಹಣ ಕಳಕೊಂಡ ವ್ಯಕ್ತಿ

ಮಂಗಳೂರು, ಮಾ.20: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬ ಬಗ್ಗೆ ಟೆಲಿಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 76,32,145 ರೂ. ಕಳೆದುಕೊಂಡ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ತನಗೆ ಟೆಲಿಗಾಂನಲ್ಲಿ ಸಾಗರಿಕಾ ಅಗರ್‌ವಾಲ್ ಎಂಬವಳ ಪರಿಚಯವಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಬಗ್ಗೆ ಆಕೆ ತಿಳಿಸಿದ್ದು, ಬಳಿಕ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಲಿಂಕ್ ಕಳುಹಿಸಿ ಲಾಗಿನ್ ಕ್ರಿಯೇಟ್ ಮಾಡಿದ್ದೆ. ಮೊದಲಿಗೆ 27,600 ರೂ. ಹೂಡಿಕೆ ಮಾಡಿದ್ದು, ಬಳಿಕ ಆ ತಿಂಗಳಲ್ಲಿ ಅಲ್ಪ ಲಾಭಾಂಶದೊಂದಿಗೆ ಹಣವನ್ನು ಹಿಂಪಡೆದಿದ್ದೆ. ಬಳಿಕ ಅಧಿಕ ಲಾಭದ ಆಮಿಷವೊಡ್ಡಿ ಹಂತ ಹಂತವಾಗಿ ಮಾ.11ರವರೆಗೆ 76,32,145 ರೂ. ಹೂಡಿಕೆ ಮಾಡಿಸಿ ಕೊಂಡಿದ್ದರು. ಲಾಭಾಂಶ 1,36,00,000 ರೂ. ತಲುಪಿದಾಗ ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದೆ. ಆದರೆ ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಹಣಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.