ಖಾಸಗಿ ಜಮೀನಿನಲ್ಲಿ ಅಕ್ರಮ ಮರಳುಗಾರಿಕೆ ಸ್ಥಗಿತಗೊಳಿಸಲು ಆದೇಶ

ಸಾಂದರ್
ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.20: ಮೂಳೂರು ತಿರುವೈಲು ಮತ್ತು ಕಂದಾವರ ಗ್ರಾಮದ ಫಲ್ಗುಣಿ ನದಿ ತೀರದ ಖಾಸಗಿ ಜಮೀನುಗಳಲ್ಲಿ ಮಾ. 6ರಂದು ನಡೆಸಿದ ದಾಳಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರು ವುದು ಕಂಡುಬಂದಿದೆ. ಈ ಜಮೀನುಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದನ್ನು ತಡೆಯಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 152ರ ಅಡಿ ಷರತ್ತು ಬದ್ಧ ಆದೇಶವನ್ನು ಸಹಾಯಕ ಆಯುಕ್ತರು ಹಾಗೂ ಉಪವಿಭಾಗ ದಂಡಾಧಿಕಾರಿ ಹರ್ಷವರ್ಧನ್ ಹೊರಡಿಸಿದ್ದಾರೆ.
ಈ ವ್ಯಾಪ್ತಿಯ 5 ಖಾಸಗಿ ಜಮೀನಿನ ಪ್ರತಿವಾದಿಗಳಿಗೆ ಈ ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೆ ಈ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಬಳಸುವ ಟ್ರ್ಯಾಕ್ಟರ್ ಗಳು, ಟಿಪ್ಪರ್‌ಗಳು, ಲಾರಿಗಳು ಮತ್ತು ಇತರ ಯಂತ್ರೋಪಕರಣಗಳ ಸಂಚಾರವನ್ನು ಸ್ಥಗಿತಗೊಳಿಸ ಬೇಕು. ಈ ಆದೇಶವನ್ನು ಅನುಸರಣೆ ಮಾಡಿದ ಬಗ್ಗೆ ಎಸಿ ನ್ಯಾಯಾಲಯಕ್ಕೆ ಲಿಖಿತವಾಗಿ ಮಾಹಿತಿ ನೀಡಬೇಕು. ತಪ್ಪಿದರೆ ಪ್ರತಿವಾದಿಗೆ ಸೇರಿದ ಜಮೀನನ್ನು ಸರಕಾರಕ್ಕೆ ಮುಟ್ಟುಗೋಲು ಹಾಕುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ನಡೆಸಲು ಹಾಗೂ ಮರಳು ಸಾಗಾಟ ಮಾಡಲು ಜಮೀನನ್ನು ಉಪಯೋಗಿಸಿಕೊಂಡಿರುವುದು ಪರಿಸರ ಹಾಗೂ ಸಾರ್ವಜ ನಿಕ ಮೂಲಸೌಕರ್ಯಗಳ ಹಾನಿಗೆ ಕಾರಣವಾಗುವುದರಿಂದ ಹಾನಿಗೊಳಗಾದ ಪರಿಸರ ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ಮರುಸ್ಥಾಪನೆಗಾಗಿ ಪ್ರತಿವಾದಿಯವರ ವಿರುದ್ಧ ಪರಿಹಾರತ್ಮಕವಾಗಿ 10 ಲಕ್ಷ ರೂ. ದಂಡ ವಿಧಿಸುವ ಎಚ್ಚರಿಕೆಯನ್ನೂ ಕೂಡ ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶವನ್ನು ಯಾಕೆ ಖಾಯಂಗೊಳಿಸಬಾರದು ಎಂಬ ಬಗ್ಗೆ ಕಾರಣಗಳನ್ನು, ಆಕ್ಷೇಪಗಳನ್ನು ಸಲ್ಲಿಸುವುದಿದ್ದರೆ ಎ.7ರಂದು ಅಪರಾಹ್ನ 3ಕ್ಕೆ ಈ ನ್ಯಾಯಾಲಯದಲ್ಲಿ ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಯ ಮೂಲಕ ಹಾಜರಾಗಿ ಸಲ್ಲಿಸಲು ಸಹಾಯಕ ಆಯುಕ್ತರು ಹರ್ಷವರ್ಧನ್ ತಿಳಿಸಿದ್ದಾರೆ.