ಬಜಾಲ್: ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ವಾರ್ಡಿನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ, ತ್ಯಾಜ್ಯ ಸಂಗ್ರಹವು ಸಮಸ್ಯೆಯಾಗಿ ಕಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿಯು ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಬಜಾಲ್ ತೋಟ, ಕಟ್ಟಪುಣಿ ಪ್ರದೇಶದಲ್ಲಿ ಹಲವು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದೆ. ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕಟ್ಟಪುನಿ ಅಂಗನವಾಡಿ ಕೇಂದ್ರ ಕೂಡಾ ಕಾರ್ಯಾಚರಿಸುತ್ತಿದೆ. ಈ ಕೇಂದ್ರದಲ್ಲಿರುವ ಮಕ್ಕಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾರಣ ಅಂಗನವಾಡಿ ಸಹಾಯಕಿಯರು ದೂರದ ಬಾವಿ ನೀರನ್ನು ಆಶ್ರಯಿಸುವಂ ತಾಗಿದೆ. ತ್ಯಾಜ್ಯ ಸಂಗ್ರಹಣಾ ವಾಹನಗಳು ಕಟ್ಟಪುನಿಯ ಪಶ್ಚಿಮ ಭಾಗದ ಬಜಾಲ್ ತೋಟ, ಬಜಾಲ್ ಕಾನೆಕರಿಯ, ಬಜಾಲ್ ಕೊಪ್ಪಳ ಪ್ರದೇಶದಲ್ಲಿರುವ ೨೫ ಮನೆಗಳ ತ್ಯಾಜ್ಯಗಳನ್ನು ಸಂಗ್ರಹಿಸಲು ಹಿಂದೇಟು ಹಾಕುತ್ತಿದೆ ಎಂದು ಸಮಿತಿ ಆರೋಪಿಸಿದೆ.
ಸಮಿತಿಯ ಕಾರ್ಯದರ್ಶಿ, ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್, ಕಟ್ಟಪುನಿ ಪ್ರದೇಶದ ನಿವಾಸಿ ಗಳಾದ ಪ್ರಮೀಳಾ ಡಿಸೋಜ, ಸತೀಶ್ ಕಟ್ಟಪುನಿ, ಪುರಂದರ, ನವೀನ್ ಕಾನೆಕರಿಯ, ಪ್ರಮೀಳಾ, ಜಯಪ್ರಕಾಶ್ ಜಲ್ಲಿಗುಡ್ಡೆ ನಿಯೋಗದಲ್ಲಿದ್ದರು.