ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ವಿಚಾರ: ಇಂಜಿನಿಯರಿಂಗ್ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ; ಆರೋಪ

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.20: ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ಹಾಕಿದ್ದಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ನಗರದ ಹಾಸ್ಟೆಲ್‌ವೊಂದರ ಮಾಲಕ ಮತ್ತವರ ಕೆಲವು ಸಹಚರರು ಮಾರಣಾಂತಿಕ ಹಲ್ಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವಿಕಾಸ್ (18) ಹಲ್ಲೆಗೊಳಗಾದ ಯುವಕ.
ಈತ ಕಳೆದ ಆರು ತಿಂಗಳಿನಿಂದ ಕದ್ರಿಯ ಬಾಯ್ಸ್ ಪಿಜಿಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಬೇಸತ್ತ ವಿಕಾಸ್ ಬೇರೆ ಕೋಣೆಗೆ ಸ್ಥಳಾಂತರಗೊಂಡಿದ್ದ. ಪಿಜಿಯ ಊಟದಲ್ಲಿ ಹುಳುಗಳು, ಕೊಳಕು ಶೌಚಾಲಯ ಇತ್ಯಾದಿ ಬಗ್ಗೆ ಗೂಗಲ್‌ನಲ್ಲಿ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿ ವಿಕಾಸ್ ಅಸಮಾಧಾನ ಹೊರಹಾಕಿದ್ದ. ಇದರಿಂದ ಆಕ್ರೋಶಗೊಂಡ ಪಿಜಿ ಮಾಲಕ ಸಂತೋಷ್ ಮತ್ತಾತನ ಸಹಚರರು ಮಾ. 17ರ ರಾತ್ರಿ 10:30ಕ್ಕೆ ವಿಕಾಸ್‌ನನ್ನು ಅಡ್ಡಗಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ರೇಟಿಂಗ್ ತೆಗೆದುಹಾಕುವಂತೆ ಒತ್ತಡ ಹಾಕಿದ್ದು, ಅದಕ್ಕೆ ವಿಕಾಸ್ ಒಪ್ಪದಿದ್ದಾಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ವಿಕಾಸ್ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.