ನಕಲಿ ಐಡಿ, ಮೀಡಿಯಾ ಸ್ಟಿಕ್ಕರ್ ದುರ್ಬಳಕೆ ತಡೆಗೆ ಕ್ರಮ: ಪೊಲೀಸ್ ಕಮಿಷನರ್

Update: 2025-03-21 18:19 IST
ನಕಲಿ ಐಡಿ, ಮೀಡಿಯಾ ಸ್ಟಿಕ್ಕರ್ ದುರ್ಬಳಕೆ ತಡೆಗೆ ಕ್ರಮ: ಪೊಲೀಸ್ ಕಮಿಷನರ್
  • whatsapp icon

ಮಂಗಳೂರು, ಮಾ.21: ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ ಮಾಡುವ ಹಾಗೂ ಮೀಡಿಯಾ ನಕಲಿ ಸ್ಟಿಕ್ಕರ್ ಅಳವಡಿಸಿಕೊಂಡಿರುವ ವಾಹನಗಳನ್ನು ಪತ್ತೆ ಹಚ್ಚುವಂತೆ ಸಂಚಾರ ಪೊಲೀಸರಿಗೆ ಪೊಲೀಸ್ ಕಮಿಷನರ್ ಅನುಪಮ್ ಆಗರ್ವಾಲ್ ಸೂಚಿಸಿದ್ದಾರೆ.

ಪತ್ರಕರ್ತರ ನಕಲಿ ಐಡಿ ಕಾರ್ಡ್ ದುರ್ಬಳಕೆ, ಮೀಡಿಯಾ, ಪ್ರೆಸ್‌ಸ್ಟಿಕ್ಕರ್ ದುರ್ಬಳಕೆಗೆ ಕಡಿವಾಣ ಹಾಕು ವಂತೆ ಹಾಗು ಕರ್ತವ್ಯ ನಿರ್ವಹಿಸುವ ಸಂದರ್ಭ ಪತ್ರಕರ್ತರಿಗೆ ಭದ್ರತೆ ಖಾತ್ರಿಪಡಿಸುವಂತೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಐಡಿ ಕಾರ್ಡ್ ದುರ್ಬಳಕೆ ಪ್ರಕರಣಗಳು ಕಂಡು ಬರುತ್ತಿವೆ. ಗುರುವಾರ ರಾತ್ರಿ ಕೊಡಿಯಾಲ್‌ಬೈಲ್ ಬಳಿ ನಡೆದ ಸರಣಿ ಅಪಘಾತದ ಕಾರೊಂದರಲ್ಲಿ ಮಾಧ್ಯಮ ಸಂಸ್ಥೆ ಯೊಂದರ ಹೆಸರು ದುರ್ಬಳಕೆ ಮಾಡಿದ ನಕಲಿ ಐಡಿ ಕಾರ್ಡ್ ಪತ್ತೆಯಾಗಿದೆ. ಮಾಧ್ಯಮ ಕಾರ್ಡ್‌ ಗಳ ದುರ್ಬಳಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಲವಾರು ವಾಹನ ಗಳಲ್ಲಿ ಮೀಡಿಯಾ ಹಾಗೂ ಪ್ರೆಸ್ ಸ್ಟಿಕ್ಕರ್ ಬಳಕೆ ಕಂಡು ಬರುತ್ತಿದೆ. ಇಂತಹ ಮಾಧ್ಯಮ ಸ್ಟಿಕ್ಕರ್ ಬಳಕೆ ಮಾಡಿ ಕಾನೂನು ಬಾಹಿರ ಕೃತ್ಯಗಳು ನಡೆಯುವ ಸಾಧ್ಯತೆ ಇದೆ. ಇಂತಹ ವಾಹನಗಳ ತಪಾಸಣೆ ನಡೆಸಬೇಕು. ಪತ್ರಕರ್ತರು ನಿರ್ಭೀತಿಯಿಂದ, ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ಭದ್ರತೆ ಖಾತ್ರಿಪಡಿಸಬೇಕು ಎಂದು ಸಂಘ ಮನವಿ ಮಾಡಿತ್ತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಮುಹಮ್ಮದ್ ಆರೀಫ್ ಪಡುಬಿದ್ರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸುಖಪಾಲ್ ಪೊಳಲಿ, ರಾಜೇಶ್ ದಡ್ಡಂಗಡಿ, ಸದಸ್ಯರಾದ ಪ್ರಸನ್ನ ಪೂಜಾರಿ, ಶಶಿಕಾಂತ್ ಜೆ., ಸಂದೀಪ್ ಕುಮಾರ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News