ಅಕ್ಷರ ದಾಸೋಹ ನೌಕರರ ಸಂಘದಿಂದ ಮನವಿ

ಮಂಗಳೂರು,ಮಾ.21:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಯ ನಿಯೋಗವು ಶುಕ್ರವಾರ ದ.ಕ.ಜಿಲ್ಲಾಧಿಕಾರಿಯ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ಮಿಡ್ ಡೇ ಮೀಲ್ ವರ್ಕರ್ಸ್ ಫೆಡರೇಶನ್‌ನ ಕರೆಯ ಮೇರೆಗೆ ದೇಶ ವ್ಯಾಪಿಯಾಗಿ ಮನವಿಯನ್ನು ನೀಡಲಾಯಿತು.
ಈ ಬಜೆಟಿನಲ್ಲಿಯೇ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕಾರ್ಮಿಕರ ವೇತನ ಏರಿಕೆ ಮಾಡಬೇಕು. ವರ್ಷದ ಎಲ್ಲಾ ತಿಂಗಳಿಗೆ ವೇತನ ನೀಡಬೇಕು. ಬಿಸಿಯೂಟ ಕಾರ್ಮಿಕರ ಸಂಬಂಧಿಸಿದ 45 ಮತ್ತು 46ನೇ ಐಎಲ್‌ಸಿ ಸಮ್ಮೇಳನದ ನಿರ್ದೇಶನಗಳನ್ನು ಜಾರಿಗೊಳಿಸಬೇಕು. ಕಾರ್ಮಿಕರನ್ನು ಖಾಯಂ ಗೊಳಿಸಬೇಕು. ಎಲ್ಲಾ ಬಿಸಿಯೂಟ ಕಾರ್ಮಿಕರಿಗೆ ಕನಿಷ್ಟ ವೇತನ ಮಾಸಿಕ 26,000 ರೂ. ನೀಡಬೇಕು. ಬಿಸಿಯೂಟ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಮಾಸಿಕ ಪಿಂಚಣಿ 10,000 ರೂ. ನೀಡಬೇಕು, ಇಪಿಎಫ್, ಇಎಸ್‌ಐ, ಗ್ರ್ಯಾಚುಯಿಟಿ ನೀಡಬೇಕು. ಶಾಲೆಗಳಲ್ಲಿ ಬಿಸಿಯೂಟ ಕಾರ್ಮಿಕರನ್ನು 4ನೇ ದರ್ಜೆಯ ಕಾರ್ಮಿಕರೆಂದು ಹುದ್ದೆ ನೀಡಬೇಕು. ಬಿಸಿಯೂಟ ಕಾರ್ಮಿಕರನ್ನು ಕೆಲಸದಿಂದ ತೆಗೆಯ ಬಾರದು. ಅವರಿಗೆ ಕೆಲಸಕ್ಕೆ ಸೇರಿಸಿಕೊಂಡಿರುವ ಪತ್ರ ಮತ್ತು ಗುರುತು ಚೀಟಿ ನೀಡಬೇಕು. ದೇಶವ್ಯಾಪಿ ಒಂದೇ ರೀತಿಯ ಸೇವಾ ನಿಯಮಾವಳಿ ಇರಬೇಕು. ಬಾಕಿ ಇರುವ ಕೇಂದ್ರ ಸರಕಾರದ ಎಲ್ಲಾ ಅನುದಾನ ವನ್ನು ಕೂಡಲೆ ಬಿಡುಗಡೆ ಮಾಡಬೇಕು. ಹಬ್ಬದ ಭತ್ತೆಯನ್ನು ವಿತರಿಸಬೇಕು. 12ನೇ ತರಗತಿಯ ತನಕ ಬಿಸಿಯೂಟ ಯೋಜನೆಯನ್ನು ವಿಸ್ತರಿಸಬೇಕು. ಕನಿಷ್ಟ ಇಬ್ಬರು ಕಾರ್ಮಿಕರು ಇರುವಂತೆ ಖಾತರಿಗೊಳಿಸ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಬೇಕು.
ಸಂಘದ ಗೌರವ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಅಧ್ಯಕ್ಷೆ ಭವ್ಯಾ, ಪ್ರಧಾನ ಕಾರ್ಯದರ್ಶಿ ಗಿರಿಜಾ ಮತ್ತಿತರರು ನಿಯೋಗದಲ್ಲಿದ್ದರು.