ಮಂಗಳೂರು - ತಲಪಾಡಿ ಹೆದ್ದಾರಿ ದುರಸ್ತಿ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

ಮಂಗಳೂರು, ಎ.1: ನಗರದಿಂದ ಕೇರಳ ಸಂಪರ್ಕಿಸುವ ರಾ.ಹೆ.66ರ ಹಳೆಯ ನೇತ್ರಾವತಿ ಸೇತುವೆ ಯಲ್ಲಿ (ತಲಪಾಡಿಯಿಂದ ಮಂಗಳೂರಿಗೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದುರಸ್ತಿ ಕಾಮಗಾರಿಯು ಸೋಮವಾರ (ಎ.1) ಆರಂಭಗೊಂಡಿದ್ದು, ಎ.30ರೊಳಗೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸೇತುವೆಯ ಒಂದು ಬದಿಯಲ್ಲಿ (ಮಂಗಳೂರಿನಿಂದ ತಲಪಾಡಿ ಕಡೆಗೆ ಹೋಗುವ) ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಪಂಪುವೆಲ್‌ನಿಂದ ತೊಕ್ಕೊಟ್ಟುವರೆಗಿನ ಹೆದ್ದಾರಿಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಅದನ್ನು ತಪ್ಪಿಸಲು ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
*ಮುಡಿಪು-ಕೊಣಾಜೆ-ದೇರಳಕಟ್ಟೆ ಕಡೆಯಿಂದ ಮಂಗಳೂರಿಗೆ ಸಂಚರಿಸುವ ಸ್ಥಳೀಯ ಲಘು ವಾಹನಗಳು /ದ್ವಿಚಕ್ರ ವಾಹನಗಳು ಕೊಣಾಜೆ-ಹರೇಕಳ (ಬ್ರಿಡ್ಜ್)ಅಡ್ಯಾರ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬಹುದು.
*ಮಂಗಳೂರು ಕಡೆಯಿಂದ ಕೊಣಾಜೆ-ಮುಡಿಪು-ದೇರಳಕಟ್ಟೆ ಕಡೆಗೆ ಸಂಚರಿಸುವ ಸ್ಥಳೀಯ ದ್ವಿಚಕ್ರ/ಲಘು ವಾಹನಗಳು ಅಡ್ಯಾರ್-ಹರೇಕಳ (ಬ್ರಿಡ್ಜ್) ಮುಖಾಂತರ ಸಂಚರಿಸಬಹುದು.
*ತಲಪಾಡಿ, ಉಳ್ಳಾಲ ಕಡೆಯಿಂದ ಬೆಂಗಳೂರು, ಉಪ್ಪಿನಂಗಡಿ, ಪುತ್ತೂರು, ಸುಳ್ಯ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟಿನಿಂದ ಬಲಕ್ಕೆ ತಿರುಗಿ ಮುಡಿಪು ಬೋಳಿಯಾರ್ -ಮೆಲ್ಕಾರ್ ಮೂಲಕ ಸಂಚರಿಸಬಹುದು.
*ಬಿ.ಸಿ ರೋಡ್ ಕಡೆಯಿಂದ ತಲಪಾಡಿ ಮತ್ತು ಕೇರಳ ಕಡೆಗೆ ಸಂಚರಿಸುವ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು ಮೂಲಕ ಸಂಚರಿಸುವುದು ಎಂದು ಆಯುಕ್ತರು ತಿಳಿಸಿದ್ದಾರೆ.