ಮಹಾಕಾವ್ಯವನ್ನು ವೈಚಾರಿಕತೆಯಿಂದ ನೋಡುವ ದೊಡ್ಡ ಪರಂಪರೆಯೇ ಭಾರತದಲ್ಲಿದೆ: ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ಭಾರತವು ಕಾವ್ಯವನ್ನು ಪುನರ್ ಸೃಷ್ಟಿ ಮಾಡುತ್ತಿದೆ. ಮಹಾಕಾವ್ಯವನ್ನು ವೈಚಾರಿಕತೆ ಯಿಂದ ನೋಡುವ ದೊಡ್ಡ ಪರಂಪರೆಯೇ ಭಾರತದಲ್ಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರದ. ತರಳಬಾಳು ಕೇಂದ್ರದಲ್ಲಿ ರವಿವಾರ ಶಿವರಾಮ ಕಾರಂತ ವೇದಿಕೆ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಲೇಖಕ, ವೈದ್ಯ ಮೂಲತ: ಉಡುಪಿಯ ಡಾ.ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಬರಹ ಒಳಗೊಂಡ ಕೃತಿ ‘ಪಾಂಗಾಳ ಡಾಕ್ಟ್ರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮಹಾಭಾರತ, ರಾಮಾಯಣ ಕುರಿತು ದೇಶದ ಎಲ್ಲ ಜನರೂ ಬರೆಯಬಹುದು. ಆ ಹಕ್ಕನ್ನು ಈ ದೇಶ ಉಳಿಸಿಕೊಂಡಿದೆ ಎಂದು ಹೇಳಿದರು.
ವೈದ್ಯರಿಗೆ ಕನ್ನಡವೇ ಅನ್ನದ ಪ್ರಶ್ನೆಯೇ ಆಗಿರುವಾಗ ಕನ್ನಡಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ. ಬೆರಳೆಣಿಕೆಯಷ್ಟು ವೈದ್ಯರು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಕಳೆದ 2000 ವರ್ಷ ಗಳಲ್ಲಿ 1800 ವೈದ್ಯ ಸಾಹಿತ್ಯ ಕೃತಿಗಳು ಬಂದಿವೆ. ಕೇವಲ ಎರಡು ವೈದ್ಯರಿಂದ ಆತ್ಮಚರಿತ್ರೆ ಬಂದಿವೆ. ಡಾ.ಪಾಂಗಾಳ್ ಅವರೂ ಆತ್ಮಚರಿತ್ರೆ ಬರೆಯಬೇಕು ಎಂದರು.
ವಿಮರ್ಶಕ ಎಸ್.ಆರ್. ವಿಜಯಶಂಕರ ಅವರು ಮಾತನಾಡಿ ವರ್ಣಾಶ್ರಮವನ್ನು ದೇಶದಲ್ಲಿ ಮೊದಲ ಬಾರಿಗೆ ವಿರೋಧಿಸಿದವರೇ ವೈದ್ಯರು ಎಂದು ಹೇಳಿದ್ದಾರೆ.
ಜಾತಿ, ಧರ್ಮವನ್ನು ಸವಾಲಾಗಿ ಸ್ವೀಕರಿಸಿದವರು ವೈದ್ಯರು. ಆದ್ದರಿಂದ ದೇಶದಲ್ಲಿ ವೈದ್ಯರನ್ನು ಕೊಂದ ಉದಾಹರಣೆಗಳೂ ಇವೆ ಎಂದು ವಿಷಾದಿಸಿದರು.
ಲೇಖಕ, ವೈದ್ಯ ಡಾ.ರಾಧಾಕೃಷ್ಣ ರಾವ್ ಪಾಂಗಾಳ ಅವರನ್ನು ಸನ್ಮಾನಿಸಲಾಯಿತು. ಪಾಂಗಾಳ ಡಾಕ್ಟ್ರು ಕೃತಿಯ ಸಂಪಾದಕ ಪಾ.ಚಂದ್ರಶೇಖರ ಚಡಗ, ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ ಉಪಸ್ಥಿತರಿದ್ದರು.
