ಆರ್‌ಟಿಐ ಕಾಯ್ದೆಯಡಿ ಮಾಹಿತಿ ನೀಡದ ಪ್ರಕರಣ: ಪಿರಿಯಾಪಟ್ಟಣದ ಹಾಲಿ, ಹಿಂದಿನ ತಹಶೀಲ್ದಾರ್‌ಗೆ ತಲಾ 25 ಸಾವಿರ ರೂ. ದಂಡ
ಮಂಗಳೂರು : ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮಾಹಿತಿ ಕೇಳಿ ಸಲ್ಲಿಸಿದ ಅರ್ಜಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದ ಹಾಲಿ ತಹಶೀಲ್ದಾರ್ ಹಾಗೂ ಮಾಹಿತಿ ಹಕ್ಕು ಅಧಿಕಾರಿ ಕುಂಞಿ ಅಹ್ಮದ್ ಮತ್ತು ನಿಕಟ ಪೂರ್ವ ತಹಶೀಲ್ದಾರ್ (ಪ್ರಸ್ತುತ ಬೆಂಗಳೂರಿನಲ್ಲಿ ರುವ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ಅಧಿಕಾರ) ಕೆ.ಚಂದ್ರ ಮೌಳಿಗೆ ಕರ್ನಾಟಕ ಮಾಹಿತಿ ಹಕ್ಕು ಆಯೋಗ ತಲಾ 25 ಸಾವಿರ ರೂ. ದಂಡ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಐದು ಪ್ರತ್ಯೇಕ ಆದೇಶಗಳಲ್ಲಿ ಒಂದು ಲಕ್ಷದ ಮೂರು ಸಾವಿರ ರೂ. ದಂಡ ಪಾವತಿಸಲು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಆದೇಶ ನೀಡಿದಂತಾಗಿದೆ.
ಅರ್ಜಿದಾರರಾದ ಮಂಗಳೂರು ಮಂಗಳಾ ದೇವಿಯ ಮಿಷನ್ ಕಾಂಪೌಂಡ್ ನಿವಾಸಿ ಮುಹಮ್ಮದ್ ಝಮೀರ್ ಎಂಬವರು 2021ರ ಅಕ್ಟೋಬರ್‌ನಲ್ಲಿ ಪಿರಿಯಾಪಟ್ಟಣ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ನಿಗದಿತ ಸಮಯ ದೊಳಗೆ ಸೂಕ್ತ ಮಾಹಿತಿ ನೀಡದಿರುವ ಕಾರಣ ಮತ್ತು ಮಾಹಿತಿ ಆಯೋಗದ ಆದೇಶ ಉಲ್ಲಂಘಿಸಿ, ನಿರ್ಲಕ್ಷ್ಯ ವಹಿಸಿ ಅರ್ಜಿದಾರರಿಗೆ ಸತಾಯಿಸಿರುವ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ತಹಶೀಲ್ದಾರ್ ಮತ್ತು ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಚಂದ್ರ ಮೌಳಿ ಅವರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ಐದನೆ ಬಾರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಈ ದಂಡ ಮೊತ್ತವನ್ನು ತಹಶೀಲ್ದಾರ್‌ರ ಸಂಬಳದಿಂದ ಕಡಿತಗೊಳಿಸಿ ಮಾಹಿತಿ ಹಕ್ಕು ಆಯೋಗದ ಖಾತೆಗೆ ಜಮೆ ಮಾಡುವಂತೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರು ಆದೇಶ ನೀಡಿದ್ದಾರೆ.
ಈ ಪ್ರಕರಣದಲ್ಲಿ ನಿಗದಿತ ಸಮಯದಲ್ಲಿ ಮಾಹಿತಿ ಒದಗಿಸದೆ ಇದ್ದ ಕಾರಣ ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮ 2005 ರ ಕಲಂ 20(1) ಅಡಿಯಲ್ಲಿ ಮಾಹಿತಿ ಹಕ್ಕು ಆಯೋಗ 2022ರ ಡಿ.13ರಂದು ದಂಡ ವಿಧಿಸುವುದಾಗಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ತಹಶೀಲ್ದಾರರು ವಿಚಾರಣೆಗೆ ಗೈರುಹಾಜರಾಗಿದ್ದು, ಸಮಂಜಸ ಹೇಳಿಕೆ ನೀಡದೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ20 (1) ರನ್ವಯ ಪಿರಿಯಾಪಟ್ಟಣ ತಾಲೂಕು ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ತಹಶೀಲ್ದಾರ್ ಚಂದ್ರ ಮೌಳಿಯವರಿಗೆ 25,000 ರೂ. ದಂಡ ವಿಧಿಸಿದೆ ಮತ್ತು ಅವರ ವೇತನದಿಂದ ಈ ದಂಡದ ಮೊತ್ತವನ್ನು ಕಡಿತಗೊಳಿಸಿ ಪಾವತಿಸಲು 2023ರ ಜ.31ಕ್ಕೆ ಆದೇಶಿಸಿತ್ತು. ಬಳಿಕ ಮಾರ್ಚ್ 3,2023ರ ಆದೇಶದಲ್ಲಿ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿತ್ತು. ಈ ಬಗ್ಗೆ ನಂತರ ನೀಡಿದ ಸಮಜಾಯಿಷಿ ಸಮರ್ಪಕ ವಾಗಿರುವುದಿಲ್ಲ ಎಂದು ತೀರ್ಮಾನಿಸಿತ್ತು. ನಿಗದಿತ ಅವಧಿಯೊಳಗೆ ಮೆಲ್ಮನವಿಧಾರರಿಗೆ ಸಂಪೂರ್ಣ ಮಾಹಿತಿ ಒದಗಿಸದೆ ಇರುವುದಕ್ಕೆ ಮತ್ತು ಆಯೋಗದ ಆದೇಶ ಪಾಲನೆಯಲ್ಲಿ ನಿರ್ಲಕ್ಷ್ಯ ಧೋರಣೆ ತೋರಿರುವುದಕ್ಕೆ ಪಿರಿಯಾಪಟ್ಟಣ ತಹಶೀಲ್ದಾರ್ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಸ್ತುತ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನಾಧಿಕಾರಿ ಕೆ ಚಂದ್ರ ಮೌಳಿಗೆ ರೂ.25,000 ದಂಡ ಪಾವತಿಸಲು ಜೂನ್.22.2023ರಂದು ರಾಜ್ಯ ಮಾಹಿತಿ ಆಯುಕ್ತರು ಆದೇಶಿಸಿದ್ದಾರೆ.
ಈ ನಡುವೆ ಪಿರಿಯಾಪಟ್ಟಣ ತಹಶೀಲ್ದಾರ್ ಚಂದ್ರ ಮೌಳಿಯವರು ವರ್ಗಾವಣೆಗೊಂಡು ತಹಶೀಲ್ದಾರ್ ಆಗಿ ನೇಮಕ ಗೊಂಡ ಕುಂಞಿ ಅಹಮದ್ ಈ ಬಗ್ಗೆ ವಿಳಂಬ ಮತ್ತು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಯೋಗ ತೀರ್ಮಾನಿಸಿ ಇಬ್ಬರಿಗೂ ದಂಡ ವಿಧಿಸಿದೆ.
ಪ್ರಕರಣದ ವಿವರ:
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲು ಕೊಪ್ಪ ಹಾರನಹಳ್ಳಿ ಹೋಬಳಿಯ ಬೈಲು ಕೊಪ್ಪ ಗ್ರಾಪಂನ ಲಕ್ಷ್ಮೀಪುರ ಗ್ರಾಮದ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ತಹಶೀಲ್ದಾರರ ಮೂಲಕ ಪಡೆಯ ಬೇಕಾಗಿದ್ದ ದಾಖಲೆಗಾಗಿ ಮಂಗಳೂರಿನ ಮಂಗಳಾದೇವಿಯ ಮಿಷನ್ ಕಾಂಪೌಂಡ್ ನಿವಾಸಿ ಮುಹಮ್ಮದ್ ಝಮೀರ್ ಎಂಬವರು 2021ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪಿರಿಯಾಪಟ್ಟಣದ ತಹಶೀಲ್ದಾರ್'ಗೆ ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿಲ್ಲ ಎನ್ನುವ ಕಾರಣಕ್ಕೆ ಮಾಹಿತಿ ಆಯೋಗ ಪ್ರಥಮ ಬಾರಿಗೆ 3,000 ರೂ. ದಂಡ ವಿಧಿಸಿತ್ತು.ಇದೇ ಪ್ರಕರಣದಲ್ಲಿ ತಪ್ಪು ಹಿಂಬರಹವನ್ನು ಅರ್ಜಿದಾರರಿಗೆ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಎರಡು ತಿಂಗಳ ಸಂಬಳದಿಂದ 15,000 ರೂ.ನ್ನು ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದಂಡ ಪಾವತಿಸಲು ಎರಡನೇ ಬಾರಿ ಆದೇಶಿಸಿತ್ತು.
20.10.2022ರಂದು ಆಯೋಗ ವಿಚಾರಣೆ ಕೋರಿ ಮಾಹಿತಿ ಒದಗಿಸಲು ನೀಡಿದ ಆದೇಶವನ್ನು ಉಲ್ಲಂಘನೆ ಮಾಡಿರುವ ಕಾರಣ ಪಿರಿಯಾಪಟ್ಟಣ ತಹಶೀಲ್ದಾರ್‌ರಿಗೆ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರು ಮೂರನೇ ಬಾರಿ 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿತ್ತು.
ಇದೀಗ ನಾಲ್ಕನೇ ಬಾರಿ ಮಾಹಿತಿ ಹಕ್ಕಿನ ಕಾಯ್ದೆ ಉಲ್ಲಂಘನೆಯ ಹಿನ್ನೆಲೆಯಲ್ಲಿ 25 ಸಾವಿರ ರೂ. ದಂಡ ವಿಧಿಸಿತ್ತು. ಮತ್ತು ಇದೀಗ ಏದನೆ ಬಾರಿಗೆ ರೂ 25 ಸಾವಿರ ಸೇರಿದಂತೆ ಒಟ್ಟು ಐದು ಬಾರಿ ಆಯೋಗದ ಆದೇಶದ ಪ್ರಕಾರ ತಹಶೀಲ್ದಾರ್ ಚಂದ್ರ ಮೌಳಿ 78 ಸಾವಿರ ರೂ. ದಂಡವನ್ನು ತಮ್ಮ ವೇತನದಿಂದ ಪಾವತಿಸಬೇಕಾಗಿ ಬಂದಿದೆ.
ಈ ನಡುವೆ ಪಿರಿಯಾಪಟ್ಟಣ ತಹಶೀಲ್ದಾರ್ ಚಂದ್ರ ಮೌಳಿಯವರು ವರ್ಗಾವಣೆಗೊಂಡು ನೂತನ ತಹಶೀಲ್ದಾರ್ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಕುಂಞಿ ಅಹಮದ್ ನೇಮಕಗೊಂಡಿದ್ದರು.ಅವರು ಮಾರ್ಚ್ 3,2023ರಂದು ಆಯೋಗದ ವಿಚಾರಣೆ ಯಲ್ಲಿ ಮಾಹಿತಿ ಯನ್ನು ಒದಗಿಸಿದ್ದರು. ಆದರೆ ಒದಗಿಸಿರುವ ಮಾಹಿತಿ ಅಪೂರ್ಣ ವಾಗಿದೆ ಎಂದು ಮೇಲ್ಮನವಿ ದಾರರ ಆಕ್ಷೇಪಣೆಯ ಕಾರಣ ಮಾಹಿತಿ ಯನ್ನು ಆಯೋಗ ತಿರಸ್ಕರಿಸಿತ್ತು. ಮೇಲ್ಮನವಿ ದಾರರು ಅಕ್ಟೋಬರ್ 21,2021 ರಲ್ಲಿ ಕೋರಿರುವ ಪೂರ್ಣ ಮಾಹಿತಿಯನ್ನು ಉಚಿತವಾಗಿ ದೃಢೀಕರಣ ದೊಂದಿಗೆ ಒದಗಿಸಿ ವಿಚಾರಣೆ ಸಂದರ್ಭದಲ್ಲಿ ಅದರ ಪ್ರತಿಯನ್ನು ಆಯೋಗದ ಮುಂದೆ ಹಾಜರು ಪಡಿಸಲು ನಿರ್ದೇಶಿಸಿತ್ತು ಮತ್ತು 30ದಿನಗಳ ಒಳಗೆ ನೀಡಬೇಕಾದ ಮಾಹಿತಿಯನ್ನು 330 ದಿನಗಳಿಗೂ ಹೆಚ್ಚು ಕಾಲದಲ್ಲಿ ನೀಡದೆ ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಲು ವಿಳಂಬ ಮಾಡಿರುವ ಬಗ್ಗೆ ಕಾರಣ ಕೇಳಿತ್ತು. ಬಳಿಕ ಮಾಹಿತಿ ನೀಡುವಲ್ಲಿ ಆಗಿರುವ ವಿಳಂಬ ಮತ್ತು ಆಯೋಗದ ಆದೇಶದ ಪಾಲನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿರುವ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1)ರನ್ವಯ ಪಿರಿಯಾಪಟ್ಟಣ ತಹಶೀಲ್ದಾರ್ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಕುಂಞಿ ಅಹಮದ್ ರವರ ಸಂಬಳದಿಂದ ರೂ.25,000 ದಂಡದ ಮೊತ್ತ ವನ್ನು ಏಕ ಕಂತಿನಲ್ಲಿ ಆರ್ ಟಿಐ ಖಾತೆಗೆ ಜಮಾ ಮಾಡಿ ರಶೀದಿಯನ್ನು ಆಯೋಗದ ಮುಂದೆ ಹಾಜರು ಪಡಿಸಲು ಹುಣಸೂರು ಉಪ ವಿಭಾಗಾಧಿಕಾರಿಗೆ ಆಯೋಗ ನಿರ್ದೇಶಿಸಿದೆ.