ಮಂಗಳೂರು: ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ 36 ಲಕ್ಷ ರೂ. ವಂಚನೆ
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ 36.34 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯೋಗಕ್ಕಾಗಿ ತಾನು ವೆಬ್‌ಸೈಟ್‌ವೊಂದರಲ್ಲಿ ತನ್ನ ಬಯೋಡೇಟಾ ಅಪ್‌ಲೋಡ್ ಮಾಡಿದ್ದೆ. ಫೆ.16ರಂದು ಅಪರಿಚಿತರು ಆಸ್ಟ್ರೇಲಿಯಾದಲ್ಲಿರುವ ಕಂಪೆನಿಯೊಂದರ ಹೆಸರಿನಲ್ಲಿ ಇ-ಮೇಲ್ ಮೂಲಕ ಜಾಬ್ ಅಪ್ಲಿಕೇಷನ್ ಕಳುಹಿಸಿ ಶಿಕ್ಷಣದ ದಾಖಲಾತಿ, ಪಾಸ್‌ಪೋರ್ಟ್, ಪೊಟೋ, ಜಾಬ್ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ ಕಳುಹಿಸುವಂತೆ ತಿಳಿಸಿದರು. ಇದನ್ನು ನಂಬಿದ ತಾನು ಬಯೋಡೇಟಾವನ್ನು ಇ-ಮೇಲ್ ಮಾಡಿದ್ದೆ. ಬಳಿಕ ತನಗೆ ಆಫರ್ ಲೆಟರ್, ಒಪ್ಪಂದ ಲೆಟರ್, ನೇಮಕಾತಿ ಲೆಟರ್, ವೀಸಾ ಕನ್‌ಫರ್ಮೇಷನ್ ಲೆಟರ್ ಕಳುಹಿಸಿ ಮೊಬೈಲ್‌ಗೆ ಕರೆ ಮಾಡಿ ವೀಸಾ ಕನ್ಫರ್ಮೇಶನ್ ಫಾರ್ಮ್ ಶುಲ್ಕ, ವೆರಿಫಿಕೇಶನ್ ಶುಲ್ಕ ಮತ್ತು ಇತರ ಶುಲ್ಕ ಪಾವತಿಸಬೇಕೆಂದು ತಿಳಿಸಿದರು. ಹಾಗೇ ಎ.4ರಿಂದ ಮೇ 6ರವರೆಗೆ ಹಂತ ಹಂತವಾಗಿ 36,34,000 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.