ಪಣಂಬೂರು: ಅಪರಿಚಿತ ವ್ಯಕ್ತಿಯ ಕೊಲೆ
ಪಣಂಬೂರು. ಆ.18: ಇಲ್ಲಿನ ಎಪಿಎಂಸಿ ಹರಾಜು ಕಟ್ಟೆಯ ಒಳಗಡೆ ಅಪರಿಚಿತ ವ್ಯಕ್ತಿಯೊಬ್ಬರನ್ನು ಹೊಡೆದು ಕೊಲೆಗೈದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತದೇಹವು ಸುಮಾರು 42ರಿಂದ 45 ವರ್ಷ ವಯೋಮಾನದ ಗಂಡಸಿದ್ದು ಎಂದು ತಿಳಿದು ಬಂದಿದೆ. ಮೃತದೇಹ ಅಂಗಾತ ಬಿದ್ದಿದ್ದು, ತಲೆ, ಮುಖದ ಮೇಲೆ ಗಾಯಗಳಿದ್ದು, ರಕ್ತ ಸೋರಿಕೆಯಾಗಿರುವ ಕುರುಗಳೂ ಸ್ಥಳದಲ್ಲಿದ್ದವು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಎಪಿಎಂಸಿ ಹರಾಜು ಕಟ್ಟೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ರಮೇಶ್ ಆಚಾರ್ಯ ಎಂಬವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಾನು ಎಂದಿನಂತೆ ಗುರುವಾರ ರಾತ್ರಿ 11.30ರ ಸುಮಾರಿಗೆ ಎಪಿಎಂಸಿ ಕಟ್ಟಡದ ವಾಣಿಜ್ಯ ಮಳಿಗೆಯ ಹಿಂಭಾಗದಿಂದಾಗಿ ಸಂಕೀರ್ಣಕ್ಕೆ ಸುತ್ತು ಹಾಕಿ ಎದುರಿನ ಮುಖ್ಯದ್ವಾರದ ಬಳಿಗೆ ತೆರಳಿದ್ದೇನೆ. ಆ ಸಂದರ್ಭ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಭಿಕ್ಷುಕರು, ಗುಜರಿ ಆಯುವವರು ಹಾಗೂ ಕೆಲ ಲಾರಿಗಳ ಚಾಲಕರು ಮತ್ತು ನಿರ್ವಾಹಕರು ಮಲಗಿದ್ದರು. ಮೃತ ವ್ಯಕ್ತಿಯ ಪರಿಚಯ ಯಾರಿಗೂ ಇಲ್ಲ. ಆತ ಪ್ರತೀ ದಿನ ಎಪಿಎಂಸಿ ಹರಾಜು ಕಟ್ಟೆಯ ಒಳಗಡೆ ಮಲಗುತ್ತಿದ್ದ. ಆತನನ್ನು ಯಾರೋ ಯಾವುದೋ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ರಮೇಶ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಪರಿಚಿತನ ಜೊತೆ ಗುರುವಾರ ರಾತ್ರಿ ಮಲಗಿದ್ದವರ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದು ಆತನನ್ನು ಕೊಲೆಗೈದಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ರಮೇಶ್ ಆಚಾರ್ಯ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.