ಕಥೊಲಿಕ್‌ ಸಭಾ ಮಂಗಳೂರು ಉತ್ತರ ವಲಯ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವ

Update: 2024-08-15 16:46 GMT

ಕಿನ್ನಿಗೋಳಿ: ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ (ರಿ.) ಮಂಗಳೂರು ಉತ್ತರ ವಲಯ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಸಲುವಾಗಿ ʼಪ್ರತಿಭಾ ಪುರಸ್ಕಾರ 2024ʼ ಕಾರ್ಯಕ್ರಮವು ನೀರುಡೆಯ ಮುಕ್ತಿ ಪ್ರಕಾಶ ಹೈಸ್ಕೂಲ್‌ ಸಭಾಭವನ ಗುರುವಾರ ನಡೆಯಿತು.

ಸಮಾರಂಭದಲ್ಲಿ ಮಂಗಳೂರು ಉತ್ತರ ವಲಯದ ವ್ಯಾಪ್ತಿಯಲ್ಲಿ 2023-2024ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸೆಲ್ಸಿ ಮತ್ತು ಪಿಯುಸಿ ಪಬ್ಲಿಕ್‌ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುತ್ತಮ ಸಾಧನೆಗೈದು ರ‍್ಯಾಂಕ್‌ ಗಳಿಸಿದ, ಸಿಎ ಪರೀಕ್ಷೆಯಲ್ಲಿ ರ‍್ಯಾಂಕ್‌ ಗಳಿಸಿದ, ಮೆಡಿಕಲ್‌ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಹಾಗೂ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಪ್ರತಿಭಾವಂತ ಕೊಂಕಣಿ ಕಥೊಲಿಕ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.‌

ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ ಓಸ್ವಾಲ್ಡ್‌ ಮೊಂತೆರೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಥೊಲಿಕ್‌ ಸಭಾ ಮಂಗಳೂರು ಉತ್ತರ ವಲಯ ಅಧ್ಯಕ್ಷರಾದ ಕುಮಾರಿ ಮೆಲ್ರೀಡ ಜೇನ್‌ ರೊಡ್ರಿಗಸ್‌ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾತನಾಡಿದ ಮಂಗಳೂರು ಯುನಿವರ್ಸಿಟಿ ಕಾಮರ್ಸ್‌ ವಿಭಾಗದ ಚೇರ್ ಪರ್ಸನ್ ಡಾ. ಪ್ರೀತಿ ಕೀರ್ತಿ ಡಿಸೋಜ, ಯುವಜನರು ತಮ್ಮಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತಂದು, ಮನಸ್ಸನ್ನು ಗುರಿಯತ್ತ ಕೇಂದ್ರೀಕೃತಗೊಳಿಸಿ ಶ್ರಮಿಸಿದರೆ ಗೆಲುವು ನಿಶ್ಚಿತ, ಸರ್ವರೂ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ಸ್ಟ್ಯಾನಿ ಆಲ್ವಾರಿಸ್‌ ರವರನ್ನು ಸನ್ಮಾನಿಸಲಾಯಿತು.

ಸಂತ ರೋಕ್ಸ್‌ ಚರ್ಚ್‌ ನ ಧರ್ಮಗುರುಗಳಾದ ರೆ. ಫಾ. ಆಲ್ಬನ್‌ ರೊಡ್ರಿಗಸ್, ವಲಯ ಮಾಜಿ ಅಧ್ಯಕ್ಷರಾದ ಲಾಜರಸ್ ಡಿಕೋಸ್ತಾ, ನೀರುಡೆ ಚರ್ಚ್‌ ಪಾಲನಾ ಸಮಿತಿ ಉಪಾಧ್ಯಕ್ಷೆ ಮೊನಿಕಾ ರೊಡ್ರಿಗಸ್ ಹಾಗೂ ಕಾರ್ಯದರ್ಶಿ ಜೆಸಿಂತಾ ನಜರೆತ್, ಕಥೊಲಿಕ್‌ ಸಭಾ ನೀರುಡೆ ಘಟಕದ ಅಧ್ಯಕ್ಷರಾದ ರಾಜೇಂದ್ರ ಪಿಂಟೊ, ಕಾರ್ಯದರ್ಶಿ ಅನಿತಾ ಲೋಬೊ, ಫ್ರಾನ್ಸಿಸ್ ಸೆರಾವೊ, ಜೇಮ್ಸ್ ಲೋಬೊ ಹಾಗೂ ಇತರ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾರಂಭದಲ್ಲಿ 46 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯದರ್ಶಿ ಮೇಬಲ್ ಶಾಂತಿ ಮಾರ್ಟಿಸ್ ವಂದಿಸಿದರು. ಸ್ಟ್ಯಾನಿ ಮಿರಾಂದ ಕಾರ್ಯಕ್ರಮವನ್ನು ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News