ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಎ.11ರಂದು ಕೆ.ಸಿ.ರೋಡ್ ನಲ್ಲಿ ಪ್ರತಿಭಟನೆ

ಉಳ್ಳಾಲ: ಕೇಂದ್ರ ಸರಕಾರ ಜಾರಿಗೊಳಿಸಿದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ, ಹಾಗೂ ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಮಾವೇಶ ಎ.11ರಂದು ಸಂಜೆ 4 ಗಂಟೆಗೆ ಕೆ.ಸಿ.ರೋಡ್ ಜಂಕ್ಷನ್ ಅಲ್ ಮುಬಾರಕ್ ಜುಮಾ ಮಸೀದಿ ಬಳಿ ನಡೆಯಲಿದೆ ಎಂದು ಸಂಯುಕ್ತ ನಾಗರಿಕ ವೇದಿಕೆ ಅಧ್ಯಕ್ಷ ಯು.ಅಬ್ದುಲ್ ಸಲಾಂ ಹೇಳಿದ್ದಾರೆ.
ಸಂಯುಕ್ತ ನಾಗರಿಕ ವೇದಿಕೆ ವತಿಯಿಂದ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಉಳ್ಳಾಲ ತಾಲೂಕು ಮಟ್ಟದ ಮಸೀದಿ, ಮದ್ರಸ, ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಸ್ಲಿಮ್ ಸಮುದಾಯದ ಧಾರ್ಮಿಕ ಮುಖಂಡರು, ಸಮುದಾಯದ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಕೆ.ಸಿ.ರೋಡ್ ಮಸೀದಿಯ ಸಂಯುಕ್ತ ಉಪ ಖಾಝಿ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಸೈಯದ್ ಅಮೀರ್ ತಂಙಳ್ ಕಿನ್ಯ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಕೆ.ಸಿ.ರೋಡ್ ಜುಮಾ ಮಸೀದಿಯ ಖತೀಬ್ ಮೌಲಾನ ಮುನೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ವಕೀಲ ಮುಝಪ್ಫರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಅಡ್ವೋಕೇಟ್ ಸುಧೀರ್ ಕುಮಾರ್ ಮುರೊಳ್ಳಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮೌಲಾನ ಮುಹಮ್ಮದ್ ಅಲಿ ತುರ್ಕಳಿಕೆ, ಮುಸ್ತಾಕ್ ಹೆನ್ನಾಬೈಲ್, ಯಾಕೂಬ್ ಕಳ್ಳರ್ಪೆ, ಎ.ಕೆ.ಕುಕ್ಕಿಲ, ಸೈಫುಲ್ಲಾ ತಂಙಳ್ ಮಂಜೇಶ್ವರ, ಅಡ್ವೊಕೇಟ್ ಹನೀಫ್ ಹುದವಿ, ಅಬ್ದುಲ್ ರಶೀದ್ ಝೈನಿ, ರಿಯಾಝ್ ಕಡಂಬು ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ನಾಗರಿಕ ವೇದಿಕೆಯ ಸ್ಥಾಪಕ ಅಧ್ಯಕ್ಷ ಸಿದ್ದೀಕ್ ತಲಪಾಡಿ, ವೇದಿಕೆಯ ಉಳ್ಳಾಲ ತಾಲೂಕು ಉಪಾಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಪ್ರಧಾನ ಕಾರ್ಯದರ್ಶಿ ಸಲಾಂ ಉಚ್ಚಿಲ, ಸಂಚಾಲಕ ಇರ್ಶಾದ್ ಅಜ್ಜಿನಡ್ಕ, ಕೋಶಾಧಿಕಾರಿ ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.