ಪುತ್ತೂರು | ಉದ್ಯೋಗ ನೀಡುವುದಾಗಿ ವಂಚನೆ: ಇಬ್ಬರು ಯುವತಿಯರ ಸಹಿತ ಮೂವರ ಬಂಧನ

Update: 2024-02-09 11:35 GMT

ಪುತ್ತೂರು: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚನೆ ಮಾಡಿದ ಪ್ರಕರಣವನ್ನು ಭೇದಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರಾ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯಾ ಎಂ.ಎಸ್.(21) ಮತ್ತು ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ(19) ಎಂದು ಗುರುತಿಸಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆ ವಿವರ: ವಿವಿಧ ಪತ್ರಿಕೆಗಳಲ್ಲಿ ಕರಾವಳಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸ ಖಾಲಿ ಇದೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಬಂದ ಜಾಹೀರಾತು ನೋಡಿದ ಕೆಲವರು ಜಾಹೀರಾತಿನಲ್ಲಿ ನಮೂದಿಸಿದ ಫೋನ್ ನಂಬರ್ ಗೆ ಕರೆ ಮಾಡಿ ವಿಚಾರಿಸಿದರು. ಅವರು ಕರೆಯನ್ನು ಸ್ವೀಕರಿಸಿ ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡ್ಬೇಕು ಎಂಬುದಾಗಿ ತಿಳಿಸಿದ್ದರು. ಅಂತೆಯೇ, ಕಳೆದ ಸುಮಾರು 7 ತಿಂಗಳಿನಿಂದ ಪದೇ ಪದೇ ಆನ್ ಲೈನ್ ಮುಖಾಂತರ ಹಣವನ್ನು ಪಾವತಿ ಮಾಡುವಂತೆ ತಿಳಿಸಿದ್ದರು. ಅದರಂತೆ ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು ಒಟ್ಟು 2,25,001 ರೂ.ವನ್ನು ಆರೋಪಿಗಳ ಖಾತೆಗೆ ಪಾವತಿ ಮಾಡಿದ್ದರು. ಇದಾದ ಬಳಿಕವೂ ಆರೋಪಿಗಳು ಪದೇ ಪದೇ ಕರೆ ಮಾಡಿ ಇನ್ನೂ ಹಣವನ್ನು ನೀಡಬೇಕು ಎಂದು ಹೇಳಿ ಕೆಲಸ ಕೊಡುವುದಾಗಿ ನಂಬಿಸಿ ಯಾವುದೇ ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಂ.ಎನ್. ಮತ್ತು ರಾಜೇಂದ್ರ ಡಿ.ಎನ್. ನಿರ್ದೇಶನದಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕ ಡಾ.ಅರುಣ್ ನಾಗೇಗೌಡರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಜಂಬುರಾಜ್ ಬಿ. ಮಹಾಜನ್ ನೇತೃತ್ವದಲ್ಲಿ ಎಎಸ್ಸೈ ಶ್ರೀಧರ್ ರೈ, ಸಿಬ್ಬಂದಿಯಾದ ಮಧು ಕೆ.ಎನ್., ಸತೀಶ್ ಎನ್., ಗಿರೀಶ ಕೆ., ಶಿವಪುತ್ರಮ್ಮ, ಎಚ್.ಜಿ. ಹಕೀಂ, ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ಕಾರ್ಯಾಚರಣೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News