ಮಂಗಳೂರು: ಮನೋಹರ್ ಪಿರೇರಾ ಮನೆಗೆ ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರು: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಉಳಾಯಿಬೆಟ್ಟು ಗ್ರಾಮದ ಕುಟಿನ್ಹ ಪದವು ಫೆರ್ಮಾಯ್ ಚರ್ಚ್ ಬಳಿಯ ನಿವಾಸಿ ಮನೋಹರ್ ಪಿರೇರಾ ಮನೆಗೆ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ಹೇಳಿದರು.
ಮನೋಹರ್ ಪಿರೇರಾ ಡಿ.17ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರಣ ಎಂದು ಹೇಳಿ ತಮ್ಮ ಕೊನೆಯ ವಾಟ್ಸಾಪ್ ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿ ಆತ್ಮಹತ್ಯೆ ಮಾಡಿ ಕೊಂಡಿದ್ದರು.
ತನ್ನ ಸಾಲವನ್ನು ಮರುಪಾವತಿಸಲು ನೀಡಿದ ಹಣವನ್ನು ಸಾಲಕ್ಕೆ ಜಮೆ ಮಾಡದೆ 9 ಲಕ್ಷ ರೂ. ಯನ್ನು ಅನಿಲ್ ಲೋಬೊ ಪಡೆದಿರುವುದಾಗಿ ಆರೋಪಿಸಿದ್ದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 108 ಅಡಿಯಲ್ಲಿ ಅನಿಲ್ ಲೋಬೊ ರನ್ನು ಬಂಧಿಸಲಾಗಿತ್ತು.
ಮನೋಹರ್ ಪಿರೇರಾ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಪರಿಸರದ ನೂರಾರು ಮಂದಿಯ ಸಹಿಯನ್ನೊ ಳಗೊಂಡ ಮನವಿಯನ್ನು ರಾಜ್ಯದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿಗಳು, ಗೃಹಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಅವರಿಗೆ ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಅವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.