ಮಂಜನಾಡಿ ಅಡುಗೆ ಅನಿಲ ದುರಂತ| ಸ್ಪೀಕರ್ ಯುಟಿ ಖಾದರ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು: ಮುನೀರ್ ಕಾಟಿಪಳ್ಳ

Update: 2024-12-29 13:46 GMT

ಯುಟಿ ಖಾದರ್‌ - ಮುನೀರ್ ಕಾಟಿಪಳ್ಳ

ಮಂಗಳೂರು: ಮಂಜನಾಡಿ ಗ್ರಾಮದ ಮನೆಯೊಂದರಲ್ಲಿ ನಡೆದ ಅಡುಗೆ ಅನಿಲ ಸಿಲಿಂಡರ್ ಸ್ಫೋಟದಲ್ಲಿ ಮೃತ ಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಈ ದುರಂತದ ದಾರುಣತೆಗೆ ಜನ ಸಮೂಹ ದುಃಖತಪ್ತವಾಗಿದೆ. ಈ ಮಧ್ಯೆ ರಾಜ್ಯ ಸರಕಾರ ಪರಿಹಾರ ಧನ ಘೋಷಿಸಲು ವಿಳಂಬ ಮಾಡುತ್ತಿರುವುದು ಜನತೆಯ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಸ್ಪೀಕರ್ ಯು.ಟಿ.ಖಾದರ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಹೆಚ್ಚುವರಿಯಾಗಿದ್ದ ಎರಡನೇ ಸಿಲಿಂಡರ್ ಸೋರಿಕೆಗೊಂಡಿರುವುದು, ವಿದ್ಯುತ್ ಸ್ವಿಚ್ ಆನ್ ಮಾಡುವಾಗ ಸೋರಿಕೆಯಾದ ಗ್ಯಾಸ್‌ಗೆ ಬೆಂಕಿ ಹತ್ತಿ ಅನಾಹುತ ಸಂಭವಿಸಿರುವುದು ಭಯ ಹುಟ್ಟಿಸುವ ವಿದ್ಯಮಾನವಾಗಿದೆ. ಮಂಜನಾಡಿ ಮಾತ್ರವಲ್ಲ, ಈ ಅವಧಿಯಲ್ಲಿ ಇನ್ನೂ ಕೆಲವೆಡೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅವಘಡಗಳು ಸಂಭವಿಸಿದ ಮತ್ತು ಪ್ರಾಣಹಾನಿ ಘಟಿಸಿರುವುದು ವರದಿಯಾಗಿದೆ. ಹಾಗಾಗಿ ಈ ಬಗ್ಗೆ ತನಿಖೆಯಾಗಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಮಂಜನಾಡಿಯ ಮನೆಯಲ್ಲಿ ನಡೆದ ಅಡುಗೆ ಅನಿಲ ಸ್ಫೋಟದ ನೇರ ಹೊಣೆ ಅಡುಗೆ ಅನಿಲ ಒದಗಿಸುವ ಕಂಪೆನಿಯದ್ದಾಗಿದೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರದ ಜೊತೆಗೆ ಈ ಕುರಿತು ಪಾರದರ್ಶಕ ತನಿಖೆಗೆ ಸರಕಾರ ಆದೇಶಿಸಬೇಕಿದೆ. ಸ್ಪೀಕರ್ ಯು.ಟಿ. ಖಾದರ್ ಈ ಪ್ರಕರಣವನ್ನು ನಿಯಮಗಳಿಗಿಂತ ಮಾನವೀಯ ದೃಷ್ಟಿಯಿಂದ ನೋಡುವಂತೆ, ಆ ದೃಷ್ಟಿಯಲ್ಲಿ ಪರಿಹಾರ ಒದಗಿಸುವಂತೆ ಅಧಿಕಾರಿಗಳು, ಗ್ಯಾಸ್ ಕಂಪೆನಿಗಳಿಗೆ ತಿಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಶಾಸಕರ ಈ ಹೇಳಿಕೆ ಬಹಳಷ್ಟು ಪ್ರಚಾರವೂ ಆಗಿದೆ. ಆದರೆ ಈ ಪ್ರಕರಣ ಮಾನವೀಯ ನೆಲೆಯಲ್ಲಿ ಮತ್ತು ಅನುಕಂಪದ ಆಧಾರದಲ್ಲಿ ಕಂಪೆನಿ ಒಂದಿಷ್ಟು ಮೊತ್ತ ಪರಿಹಾರ ಒದಗಿಸಿ ಕೈ ತೊಳೆದು ಮುಗಿಸುವಷ್ಟು ಸರಳ ಅಲ್ಲ. ದ.ಕ. ಜಿಲ್ಲಾಧಿಕಾರಿ ತಕ್ಷಣ ಈ ಕುರಿತು ಸರಿಯಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು. ಅಮಾಯಕ ಮೂರು ಹೆಣ್ಣು ಮಕ್ಕಳ ದಾರುಣ ಸಾವಿಗೆ ಕಾರಣವಾಗಿರುವ ಪ್ರಕರಣದಲ್ಲಿ ಗ್ಯಾಸ್ ಸೋರಿಕೆಗೆ ಕಂಪೆನಿಯ ತಪ್ಪುಗಳು ಕಾರಣವಾಗಿದ್ದರೆ ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ಆಗಬೇಕು. ಕಂಪೆನಿಯ ಕಡೆಯಿಂದ ಸಂತ್ರಸ್ತ ಕುಟುಂಬಕ್ಕೆ ದೊಡ್ಡ ಪ್ರಮಾಣದ ಪರಿಹಾರವೂ ದೊರಕಬೇಕು. ಜೊತೆಗೆ ಈ ರೀತಿಯ ದುರಂತಗಳು ಮುಂದಕ್ಕೆ ನಡೆಯದಂತೆ, ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ.

ಸ್ಪೀಕರ್ ಖಾದರ್ ಟೀಕಾಕಾರರನ್ನು ಹಂಗಿಸುವುದನ್ನು ಬಿಟ್ಟು ದುರಂತ ಘಟಿಸಿದ ಆರಂಭದಲ್ಲಿ ತನ್ನಿಂದಾದ ಲೋಪಗಳನ್ನು ಸರಿಪಡಿಸಿಕೊಂಡು ಈ ಪ್ರಕರಣದ ಸೂಕ್ಷ್ಮತೆಯನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸರಕಾರ ಹಾಗೂ ವಿವಿಧ ಇಲಾಖೆಗಳಿಂದ ಆಗಬೇಕಾದ ಕೆಲಸಗಳು, ನಡೆಯಬೇಕಾದ ತನಿಖೆ, ಒದಗಿಸಬೇಕಾದ ಪರಿಹಾರಗಳು ಕ್ರಮಬದ್ಧವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News