ಪುತ್ತೂರು: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ; ಮನವಿ ಸಲ್ಲಿಕೆ

Update: 2023-11-24 15:38 GMT

ಪುತ್ತೂರು: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪುತ್ತೂರು ತಾಲೂಕು ಸಮಿತಿಯಿಂದ (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್‍ಗೆ ಸಂಯೋಜಿತ) ಶುಕ್ರವಾರ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಎಐಯುಟಿಯುಸಿ ರಾಜ್ಯ ಖಜಾಂಚಿ ಸಂಧ್ಯಾ ಅವರು ಮಾತನಾಡಿ ಸರಕಾರ ಆಶಾ ಕಾರ್ಯಕರ್ತೆ ಯರನ್ನು ಆರೋಗ್ಯ ಇಲಾಖೆಯ ಬುನಾದಿ ಎಂದು ಹೊಗಳಿ ಕೊನೆಗೆ ಇಲಾಖೆಯ ಎಲ್ಲಾ ಕೆಲಸ ಮಾಡಿಸುತ್ತಾರೆ. ಇಲಾಖೆಯು ಒತ್ತಡ ಪೂರಕವಾಗಿ ನಿಮ್ಮದಲ್ಲದ ಕೆಲಸವನ್ನು ಮಾಡಿಸುತ್ತಿದ್ದಾರೆ ಪ್ರತಿ ತಿಂಗಳು 2 ಕುಂದು ಕೊರತೆ ಸಭೆ ನಡೆಸಬೇಕಾಗಿದ್ದು ಅದನ್ನೂ ಮಾಡುತ್ತಿಲ್ಲ. ಶೈಕ್ಷಣಿಕ ಮತ್ತು ಚುನಾವಣೆ ಸಂದರ್ಭ ಸಹಿತ ನಿಮ್ಮಿಂದ ಕೆಲಸ ಮಾಡಿಸು ತ್ತಾರೆ. ಒಟ್ಟಿನಲ್ಲಿ ನಿಮ್ಮಿಂದ ಇಲಾಖೆ ಬಿಟ್ಟಿ ಚಾಕ್ರಿ ಮಾಡಿಸಿಕೊಳ್ಳುತ್ತಿದೆ. ಇದನ್ನು ನಿಲ್ಲಿಸಬೇಕು. ಕನಿಷ್ಠ ರೂ. 15ಸಾವಿರ ವೇತನ ಪಿಕ್ಸ್ ಮಾಡಬೇಕು ಎಂದ ಅವರು ಸರಕಾರ ಬೇರೆ ಬೇರೆ ವಿಚಾರದಲ್ಲಿ ದುಂದುವೆಚ್ಚ ಮಾಡುತ್ತಾರೆ. ಆಶಾ ಕಾರ್ಯಕರ್ತೆಯರಿಗೆ ಯಾಕೆ ವೇತನ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಲಿ ಎಂದರು.

ಆಶಾ ಕಾರ್ಯಕರ್ತೆಯರ ಪುತ್ತೂರು ತಾಲೂಕು ಸಂಘದ ಅಧ್ಯಕ್ಷೆ ಅಮಿತಾ ಹರೀಶ್ ಅವರು ಮಾತನಾಡಿ ಕೊರೋನಾ ಸಂದರ್ಭ ನಾವು ದೇವರಂತೆ ಎಲ್ಲರಿಗೂ ಕಂಡಿದ್ದೆವು. ಆದರೆ ನಮಗೆ ಕೇವಲ ರೂ. 5ಸಾವಿರ ನೀಡಿ ಕೆಲಸ ಮಾಡಿಸು ತ್ತಾರೆ. ಯಾವುದೇ ಸರಕಾರ ನಮ್ಮ ಕುಂದುಕೊರತೆ ಆಲಿಸುತ್ತಿಲ್ಲ. ಮನೆ ಮನೆ ಭೇಟಿಯ ಸಂದರ್ಭ ಕೆಲವರ ಅನಾರೋಗ್ಯಕ್ಕೆ ಸಂಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಕಫ ಸಂಗ್ರಹ ಮಾಡಬೇಕಾದರೆ ಅದಕ್ಕೆ ಸರಿಯಾದ ತರಬೇತಿಯೂ ನಮಗೆ ಕೊಟ್ಟಿಲ್ಲ. ಪ್ರತಿ ಭಾರಿ ಮಾತ್ರ ನಮ್ಮಿಂದ ಕೆಲಸಮಾಡಲು ಮೆಸೇಜ್ ಹಾಕುತ್ತಾರೆ. ನಮ್ಮಿಂದ ಬಿಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಸಂಯುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷೆ ಶೋಭಾ ಎಐಯುಟಿಯುಸಿ ಜಿಲ್ಲಾ ಉಸ್ತುವಾರಿ ಹರಿಣಿ, ಆಶಾ ಕಾರ್ಯಕರ್ತೆ ಯರ ಪುತ್ತೂರು ಸಂಘದ ಕಾರ್ಯದರ್ಶಿ ಚಿತ್ರ, ಸಂಘದ ಉಪಾಧ್ಯಕ್ಷೆ ನಳಿನಾಕ್ಷಿ, ಪುಷ್ಪ ಕೊಯಿಲ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪುತ್ತೂರು ಮತ್ತು ಕಡಬ ತಾಲೂಕಿನ ಆಶಾ ಕಾರ್ಯಕರ್ತೆಯರು ನಗರದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧದ ಮುಂಭಾಗದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕೊನೆಗೆ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ತೆರಳಿ ತಮ್ಮ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News