ಶಿಷ್ಟಾಚಾರ ಬದಿಗೊತ್ತಿ ಗೇಟ್‌ನೊಳಗೆ ನುಸುಳಿ ಜನರ ಬವಣೆ ಅರಿತ ಸ್ಪೀಕರ್ ಯುಟಿ ಖಾದರ್

Update: 2024-01-20 17:16 GMT

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನಿಂದ ಒಳಪೇಟೆಗೆ ಹೋಗುವ ಅಡ್ಡದಾರಿಯನ್ನು ರೈಲ್ವೆ ಮುಚ್ಚಿದ್ದರಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಹಳಿಗೆ ಅಳವಡಿಸಿರುವ ಕಬ್ಬಿಣದ ಗೇಟ್‌ನೊಳಗೆ ಶಿಷ್ಟಾಚಾರ ಬದಿಗೊತ್ತಿ ನುಸುಳಿ ಆ ಕಡೆ ಪ್ರವೇಶಿಸಿದ ಯು.ಟಿ. ಖಾದರ್ ಜನಸಾಮಾನ್ಯರ ಬವಣೆಯನ್ನು ಸ್ವತಃ ಅರಿತುಕೊಳ್ಳುವ ಪ್ರಯತ್ನ ಮಾಡಿದರು.

ಹಲವು ವರ್ಷಗಳಿಂದ ಜನರು ಬಳಸುತ್ತಿದ್ದ ತೊಕ್ಕೊಟ್ಟಿನ ಈ ಕಾಲುದಾರಿಯ ಮಧ್ಯೆ ರೈಲ್ವೆ ಹಳಿ ಇದೆ. ಈ ಹಿನ್ನೆಲೆಯಲ್ಲಿ ಜನರು ಅತ್ಯಂತ ಎಚ್ಚರಿಕೆಯಿಂದ ಈ ದಾರಿಯನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ರೈಲ್ವೆ ಇಲಾಖೆ ಯಾವುದೇ ಸೂಚನೆ ನೀಡದೆ ಈ ದಾರಿಯನ್ನು ಕಬ್ಬಿಣದ ಸಲಾಕೆಗಳನ್ನು ಬಳಸಿ ಮುಚ್ಚಿ ಗೇಟ್ ಅಳವಡಿಸಲಾಗಿತ್ತು. ಇದರಿಂದ ಹಿರಿಯ ನಾಗರಿಕರು, ಮಹಿಳೆಯರಿಗೆ ಇಲ್ಲಿ ಹಳಿ ದಾಟುವುದು ಕಷ್ಟಕರವಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ, ಜಿಲ್ಲಾಧಿಕಾರಿಗೆ ಸಾರ್ವಜನಿಕರು ದೂರು ನೀಡಿ ಗೇಟು ತೆರವುಗೊಳಿಸುವಂತೆ ಮನವಿ ಮಾಡಿದ್ದರು.

ಈ ನಡುವೆ ವಿಷಯ ಅರಿತ ಸ್ಪೀಕರ್ ಯು.ಟಿ.ಖಾದರ್ ಸ್ವತಃ ತಾನೇ ಗೇಟು ಅಳವಡಿಸಿದ ಜಾಗಕ್ಕೆ ತೆರಳಿ ಶಿಷ್ಟಾಚಾರವನ್ನು ಬದಿಗೊತ್ತಿ ಜನಸಾಮಾನ್ಯರಂತೆ ಗೇಟ್‌ನಡಿ ನುಸುಳಿ ಜನರು ಪಡುವ ಬವಣೆಯನ್ನು ಸ್ವತಃ ಅರಿತುಕೊಂಡರು. ಅಲ್ಲದೆ ಈ ಕುರಿತು ಶೀಘ್ರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.










Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News