ಅಂಬಿಗ ಕರೀಂ ಬ್ಯಾರಿಗೆ ರಾಜ್ಯೋತ್ಸವ ಪ್ರಶಸ್ತಿ: ಸಂತಸ ವ್ಯಕ್ತಪಡಿಸಿದ ಸ್ನೇಹಿತ ಲಿಂಗಪ್ಪಣ್ಣ
ಮಂಗಳೂರು: ಅಬ್ದುಲ್ ಕರೀಂ ಬ್ಯಾರಿ ಅಡ್ಡೂರು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಕರೀಂ ಅವರ ಇಳಿವಯಸ್ಸಿನ ಸ್ನೇಹಿತ ಲಿಂಗಪ್ಪಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, “ಕರೀಂ ಬ್ಯಾರಿ ಅವರ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ನನಗೆ ತೀವ್ರ ಸಂತಸ ತಂದಿದೆ. ನಾವಿಬ್ಬರೂ ಕಳೆದ 70 ವರ್ಷಕ್ಕೂ ಅಧಿಕ ಒಟ್ಟಾಗಿ ಸಹೋದರ ರಂತೆ ಇದ್ದೇವೆ. ಕರೀಂ ಮುಸ್ಲಿಂ, ನಾನು ಹಿಂದೂ ಎಂಬ ಭೇದ ಭಾವ ನಮ್ಮಲ್ಲಿಲ್ಲ. ದೇವರು ಈವರೆಗೂ ಒಳ್ಳೆಯ ರೀತಿಯಲ್ಲಿ ಮುಂದುವರಿಸಿದ್ದಾರೆ. ತಡ ರಾತ್ರಿ ಕರೆದರೂ ಕರೀಂ ಅವರು ಜನರಿಗೆ ಸ್ಪಂದಿಸುತ್ತಿದ್ದರು. ಅವರು ಹಣದಾಸೆಗೆ ಬದುಕಿದವರಲ್ಲ. ಜಾತಿ-ಧರ್ಮ ಮೀರಿ ಎಲ್ಲರಿಗೂ ಸೇವೆ ನೀಡಿದ್ದಾರೆ” ಎಂದು ಸ್ಮರಿಸಿದರು. ತನ್ನ ಸ್ನೇಹಿತನ ಮಾತು ಕೇಳಿ ಕರೀಂ ಬ್ಯಾರಿ ಅವರು ಭಾವುಕರಾದರು.
ಮುಸ್ಲಿಂ ಬಾಹುಳ್ಯದ ಊರು ಅಡ್ಡೂರು. ಇಲ್ಲಿ ಹಿಂದು, ಕ್ರೈಸ್ತ ಕುಟುಂಬದ ಮನೆಗಳು ಬೆರಳಣಿಕೆಯಷ್ಟಿವೆ. ಆದರೂ ಎಲ್ಲರೂ ಅನ್ಯೋನ್ಯವಾಗಿದ್ದಾರೆ. ಜಾತಿ-ಧರ್ಮ ಮೀರಿ ಸಹೋದರರಂತೆ ಬದುಕುವ ಇಲ್ಲಿನ ಜನರು ಸಾಮರಸ್ಯದ ಸಂಕೇತವಾಗಿ ಗುರುತಿಸಿಕೊಂಡಿದ್ದಾರೆ.