ಎಸ್ ಸಿಡಿಸಿಸಿ ಬ್ಯಾಂಕ್ ಕಲ್ಲಡ್ಕ ಸ್ಥಳಾಂತರ ಶಾಖೆ ಉದ್ಘಾಟನೆ

Update: 2025-01-06 11:55 GMT

ಬಂಟ್ವಾಳ, ಜ.6: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್ ಸಿಡಿಸಿಸಿ ಬ್ಯಾಂಕ್ ) ಕೃಷಿಕರ ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರ ನೀಡುತ್ತಾ ಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಕಲ್ಲಡ್ಕದ ಕಾವೇರಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಎಸ್ ಸಿಡಿಸಿಸಿ ಬ್ಯಾಂಕ್ ಕಲ್ಲಡ್ಕ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅವಿಭಜಿತ ದ.ಕ ಜಿಲ್ಲೆಯಲ್ಲಿ ರಾಜಕೀಯರಹಿತವಾಗಿ ಬೆಳೆದಿರುವ ಏಕೈಕ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಎಸ್ ಸಿಡಿಸಿಸಿ ಬ್ಯಾಂಕ್ ಗೆ ಇದೆ. ಕಳೆದ 29 ವರ್ಷಗಳಲ್ಲಿ ಜಿಲ್ಲೆಯ ಕೃಷಿಕರು ಶೇ.100 ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬ್ಯಾಂಕ್ ಸಾಲ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೃಷಿಕರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಮಹಿಳೆಯರ ಸ್ವಾವಲಂಬನೆಗಾಗಿ ನಮ್ಮ ಬ್ಯಾಂಕ್ ಪ್ರಾಮಾಣಿಕ ಪ್ರಯತ್ನ ಪಡುತ್ತಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

2025ಕ್ಕೆ ನಮ್ಮ ಸ್ವಸಹಾಯ ಗುಂಪುಗಳಿಗೆ 25 ವರ್ಷ ತುಂಬುತ್ತಿದೆ. ಮಹಿಳೆಯರು ನಮ್ಮ ಬ್ಯಾಂಕ್ ನಿಂದ ಸಾಲ ಪಡೆದು ಪುರುಷರಿಗೆ ಸರಿಸಮಾನವಾಗಿ ಬೆಳೆದಿದ್ದಾರೆ. ಆರ್ಥಿಕವಾಗಿ ಸಶಕ್ತರಾಗಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಗ್ರಾಹಕರಿಗೆ ವಿನೂತನ ಸೇವೆ ಒದಗಿಸುವ ದೃಷ್ಟಿಯಿಂದ ಹೊಸ ಶಾಖೆಗೆ ಸ್ಥಳಾಂತರ ಮಾಡಲಾಗಿದೆ. ನೂತನ ಶಾಖೆಯು ಸಂಪೂರ್ಣ ಗಣಕೀಕೃತಗೊಂಡಿದ್ದು, ಆರ್ ಟಿಜಿಎಸ್, ನೆಫ್ಟ್, ರುಪೇ ಕಾರ್ಡ್ ಸೌಲಭ್ಯ ಹಾಗೂ ಕೋರ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸಲಿದೆ. ಕಲ್ಲಡ್ಕದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತಾಡಿ, ಬೆಳೆಯುತ್ತಿರುವ ಕಲ್ಲಡ್ಕದಲ್ಲಿ ಇಂತಹ ಗ್ರಾಹಕ ಸ್ನೇಹಿಯಾದ ಸುಸಜ್ಜಿತ ಬ್ಯಾಂಕ್ ನ ಅವಶ್ಯಕತೆ ಇತ್ತು. ಗ್ರಾಹಕರು ಬ್ಯಾಂಕ್ ನ ಎಲ್ಲ ಸೇವೆಯನ್ನು ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿ“ ಎಂದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತಾಡಿ, ಕಲ್ಲಡ್ಕ ಬೆಳೆಯುತ್ತಿದೆ. ಕಲ್ಲಡ್ಕದಲ್ಲಿ ಪ್ರಾರಂಭಗೊಂಡಿರುವ ಎಸ್ ಸಿಡಿಸಿಸಿ ಬ್ಯಾಂಕ್ ನ ಸ್ಥಳಾಂತರಿತ ಶಾಖೆ ಇನ್ನಷ್ಟು ಅಭಿವೃದ್ಧಿಗೊಳ್ಳಲಿ. ಆ ಮೂಲಕ ಕಲ್ಲಡ್ಕಕ್ಕೆ ಇನ್ನಷ್ಟು ಒಳ್ಳೆಯ ಹೆಸರು ಬರಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಕಾವೇರಿ ಸಂಕೀರ್ಣ ಕಟ್ಟಡದ ಮಾಲಕ ವರದರಾಯ ಪ್ರಭು, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕ ಜಯರಾಮ್ ರೈ, ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾಂಕಿನ ಹಿರಿಯ ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಶಶಿಕುಮಾರ್ ರೈ ಬೊಳ್ಯೊಟ್ಟು ವಂದಿಸಿದರು.

ದಿನೇಶ್ ಅಮಿನ್ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖಾ ವ್ಯವಸ್ಥಾಪಕಿ ಮೀನಾಕ್ಷಿ ಮೇಲ್ವಿಚಾರಕ ಯೋಗೀಶ್ ಎಚ್., ಸ್ವ ಸಹಾಯ ಸಂಘಗಳ ಮೇಲ್ವಿಚಾರಕ ರಂಜಿತ್ ಕುಮಾರ್, ಕೀರ್ತಿರಾಜ್ , ಉದಯ, ಗೋಪಾಲಕೃಷ್ಣ, ಸಂಜೀವ ಪೂಜಾರಿ, ಸುಕುಮಾರ್, ಲಕ್ಷ್ಮೀ, ಮೋಹಿನಿ, ಗೋಪಾಲಕೃಷ್ಣ, ಜಯಂತಿ, ಯಶೋದಾರನ್ನು ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News