ಆ.25ರಂದು ಅಡ್ಡೂರು ಕಮ್ಯೂನಿಟಿ ಸೆಂಟರ್ ನಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಜ್ಪೆ: ಅಡ್ಡೂರು ಸೆಂಟ್ರಲ್ ಕಮಿಟಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಡೂರು ಕಮ್ಯೂನಿಟಿ ಸೆಂಟರ್ 2023-2024 ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಆ. 25ರಂದು ಬೆಳಿಗ್ಗೆ 9:45ಕ್ಕೆ ಅಡ್ಡೂರಿನ ಕಮ್ಯೂನಿಟಿ ಸೆಂಟರ್ ನಲ್ಲಿ ಜರುಗಲಿದೆ.
ಅಡ್ಡೂರು ಕಮ್ಯೂನಿಟಿ ಸೆಂಟರ್ ಕಳೆದ ವರ್ಷ ಸ್ಥಳೀಯ ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರ ಮೂಲಕ ಟ್ವೀಷನ್ ತರಗತಿ ನಡೆಸಿ ಅತ್ಯುತ್ತಮ ಫಲಿತಾಂಶ ತರಲು ವಿದ್ಯಾರ್ಥಿಗಳಿಗೆ ಸಹಕಾರ ನೀಡಿತ್ತು. ಅದರೊಂದಿಗೆ ಸುಮಾರು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕೆರಿಯರ್ ಕೌನ್ಸಿಲಿಂಗ್, ಮಾಹಿತಿ ಶಿಬಿರ ಮತ್ತು ಕಲಿಕಾ ಕೌಶಲ್ಯದ ತರಬೇತಿಯನ್ನೂ ನೀಡಿತ್ತು. ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅವರು ನಿಶ್ಚಯಿಸಿದ ಗುರಿಯಲ್ಲಿ ಸಾಮರ್ಥ್ಯ ಪರೀಕ್ಷೆ ನಡೆಸಿ ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿತ್ತು. ಈ ಪ್ರಯತ್ನದಲ್ಲಿ ನೂರಾರು ವಿದ್ಯಾರ್ಥಿಗಳನ್ನು ವಿವಿಧ ವೃತ್ತಿಪರ ಕೋರ್ಸ್ ಗೆ ತಯಾರುಗೊಳಿಸುವ ಪ್ರಯತ್ನ ಮಾಡಲಾಗಿತ್ತು. ಈಗ ಈ ವಿದ್ಯಾರ್ಥಿಗಳ ಜೊತೆಗೆ, ಅಡ್ಡೂರು ಸುತ್ತಮುತ್ತಲಿನ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಹಲವು ವಿದ್ಯಾರ್ಥಿಗಳಿಗೆ ಈ ಮೊದಲು ಅಡ್ಡೂರು ಕಮ್ಯೂನಿಟಿ ಸೆಂಟರ್ ನ ಶಿಫಾರಸಿನಲ್ಲಿ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಸೀಟನ್ನು ನೀಡಲಾಗಿತ್ತು.
ಆ. 25 ರಂದು ನಡೆಯುವ ಕಾರ್ಯಕ್ರಮದಲ್ಲಿ ಪೋಷಕರಿಗೆ "ನನ್ನ ಮಗು, ನನ್ನ ಭದ್ರತೆ" ಎಂಬ ವಿಚಾರದಲ್ಲಿ ಖ್ಯಾತ ಮಕ್ಕಳ ಮನಶಾಸ್ತ್ರಜ್ಞರಾಗಿರುವ ಡಾ. ರುಕ್ಸಾನಾ ಹಸನ್ ಅವರು ವಿಷಯ ಪ್ರಾಸ್ತಾವಿಸಿ ಮಾತನಾಡಲಿದ್ದಾರೆ ಎಂದು ಅಡ್ಡೂರು ಕಮ್ಯೂನಿಟಿ ಸೆಂಟರ್ ನ ಪ್ರಕಟನೆ ತಿಳಿಸಿದೆ.