ಸೆ.30: ಬೆಂಗಳೂರಿನಲ್ಲಿ ‘ಬ್ಯಾರೀಸ್ ಸೌಹಾರ್ದ ಭವನ’ ಉದ್ಘಾಟನೆ
ಮಂಗಳೂರು, ಸೆ.28: ಬ್ಯಾರಿ ಮುಸ್ಲಿಂ ಸಮುದಾಯದ ಬಹುಕಾಲದ ‘ಕನಸಿನ ಭವನ’ ‘ಬ್ಯಾರೀಸ್ ಸೌಹಾರ್ದ ಭವನ’ದ ಉದ್ಘಾಟನಾ ಕಾರ್ಯಕ್ರಮವು ಸೆ.30ರಂದು ನಡೆಯಲಿದೆ.
ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ನ ಎದುರುಗಡೆ ನಿರ್ಮಿಸಲ್ಪಟ್ಟ ‘ಬ್ಯಾರೀಸ್ ಸೌಹಾರ್ದ ಭವನ’ವನ್ನು ಸೆ.30ರ ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಗೌರವ ಅತಿಥಿಯಾಗಿ ಉಪಸ್ಥಿತರಿರುವರು. ಬ್ಯಾರಿ ಆಂದೋಲನದ ರೂವಾರಿ ಹಾಗೂ ಮಾಜಿ ಸಚಿವ ಬಿ.ಎ.ಮೊಹಿದೀನ್ ಸ್ಮಾರಕ ಆಡಿಟೋರಿಯಂ ಅನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಫಾರೂಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಇಂಧನ ಖಾತೆಯ ಸಚಿವ ಕೆ.ಜೆ. ಜಾರ್ಜ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಝಮೀರ್ ಅಹ್ಮದ್ ಖಾನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಹಜ್, ಪೌರಾಡಳಿತ ಖಾತೆಯ ಸಚಿವ ರಹೀಂ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ವಿಧಾನ ಪರಿಷತ್‌ನ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಎನ್.ಎ. ಹಾರಿಸ್, ರಿಝ್ವಾನ್ ಅರ್ಷದ್ ಭಾಗವಹಿಸಲಿದ್ದಾರೆ.
ಸುಮಾರು 10 ಸಾವಿರ ಚ.ಅ. ವಿಸ್ತೀರ್ಣದ ಜಮೀನಿನಲ್ಲಿ ಅಂದಾಜು 13.5 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ತಳ ಅಂತಸ್ತು ಸಹಿತ 7 ಮಹಡಿಯ ಈ ಭವನದಲ್ಲಿ 1 ಸಾವಿರ ಮಂದಿ ಸೇರಬಹುದಾದಷ್ಟು ವಿಶಾಲ ಜಾಗವಿದೆ. ಅಸೋಸಿಯೇಶನ್‌ನ ಕಚೇರಿ, ಹೆಣ್ಮಕ್ಕಳ ವಸತಿಗೃಹ, ಮೀಟಿಂಗ್ ಹಾಲ್, ಗ್ರಂಥಾಲಯ, ಬ್ಯಾರಿ ಮ್ಯೂಸಿಯಂ, ನಮಾಝ್ ಮಾಡಲು ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆಯೂ ಇದೆ.
ಈ ಕಾರ್ಯಕ್ರಮದಲ್ಲಿ ಸರ್ವರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಪರವಾಗಿ ಬ್ಯಾರೀಸ್ ಸೌಹಾರ್ದ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮನವಿ ಮಾಡಿದ್ದಾರೆ.