ಉಪ್ಪಿನಂಗಡಿ- ನೆಕ್ಕಿಲಾಡಿಯಲ್ಲಿ ಸರಣಿ ಕಳ್ಳತನ
ಉಪ್ಪಿನಂಗಡಿ: 34 ನೇ ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯ 6 ಅಂಗಡಿಗಳಿಂದ ಕಳವುಗೈದ ಪ್ರಕರಣ ನ.4ರಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ರೈನ್‍ಕೋಟ್ ಧರಿಸಿದ ಕಳ್ಳನೋರ್ವ ಈ ಕೃತ್ಯವನ್ನು ಎಸಗಿರುವುದು ಸಿಸಿ ಟಿವಿ ದೃಶ್ಯಾವಳಿಯಲ್ಲಿ ದೃಢಪಟ್ಟಿದೆ.
34 ನೇ ನೆಕ್ಕಿಲಾಡಿಯ ಭಾರತ್ ಪೆಟ್ರೋಲ್ ಪಂಪಿನ ಕಚೇರಿಗೆ ನುಗ್ಗಿದ ಕಳ್ಳ ಅಲ್ಲಿಂದ ನಗದು ಹಣವನ್ನು ದೋಚಿದ್ದಾನೆ. ಅಂತೆಯೇ ನೆಕ್ಕಿಲಾಡಿಯ ಬೊಳ್ಳಾರ್ ಎಂಬಲ್ಲಿರುವ ವೃಂದಾ ವೈಭವ್ ಗ್ಯಾಸ್ ಫಿಲ್ಲಿಂಗ್ ಸೆಂಟರ್ ಗೆ ನುಗ್ಗಿ ಗಾಜಿನ ಬಾಗಿಲನ್ನು ಮುರಿದು ಸೊತ್ತು ಹಾನಿಗೊಳಿಸಿದ್ದಾನೆ. ಒಡೆದ ಗಾಜಿನ ಬಾಗಿಲಿನ ಮೌಲ್ಯವೇ ಸುಮಾರು ಎರಡು ಲಕ್ಷದಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿ ದೇವರ ಮಂಟಪದಲ್ಲಿನ ಬೆಳ್ಳಿ ಚೆಂಬು ಹಾಗೂ ಕ್ಯಾಶ್ ಡ್ರಾಯರ್ ನಲ್ಲಿದ್ದ ನಗದನ್ನು ದೋಚಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ಗೂಡಂಗಡಿಗೆ ನುಗ್ಗಿ ಅಲ್ಲಿಂದ ಸಿಗರೇಟ್ ಪ್ಯಾಕೇಟ್‍ಗಳನ್ನು ಕದ್ದೊಯ್ದಿರುತ್ತಾನೆ.
ಉಪ್ಪಿನಂಗಡಿಯ ಗಾಂಧೀ ಪಾರ್ಕ್ ಬಳಿಯ ಜಗದೀಶ್ ನಾಯಕ್ ಎಂಬವರ ಟೈಲ್ಸ್ ಅಂಗಡಿಗೆ ನುಗ್ಗಿ 20 ಸಾವಿರ ನಗದು ಹಣವನ್ನು ದೋಚಿದ್ದಾನೆ ಹಾಗೂ ಅಲ್ಲೇ ಪಕ್ಕದ ಗುಜಿರಿ ಅಂಗಡಿಗೆ ನುಗ್ಗಿದ ಕಳ್ಳ ಅಂಗಡಿಯೊಳಗಿದ್ದ ತಾಮ್ರದ ಬೆಲೆ ಬಾಳುವ ಸೊತ್ತುಗಳನ್ನು ಕದ್ದೊಯ್ದಿದ್ದಾನೆ. ಅದರ ಸನಿಹದಲ್ಲಿರುವ ಹೋಟೇಲಿಗೂ ನುಗ್ಗಿ ಅಲ್ಲಿಂದಲೂ ನಗದು ಹಣವನ್ನು ದೋಚಿರುತ್ತಾನೆ.
ಎರಡು ಗ್ರಾಮಗಳಲ್ಲಿ ತಲಾ 3 ಅಂಗಡಿಗಳನ್ನು ಕೇಂದ್ರೀಕರಿಸಿ ಕಳ್ಳತನ ಮಾಡಿರುವ ಕಳ್ಳ ನಸುಕಿನ ವೇಳೆ 3 ಗಂಟೆಯಿಂದ 5 ಗಂಟೆಯ ಮಧ್ಯೆ ಈ ಎಲ್ಲಾ ಆರು ಅಂಗಡಿಗಳಲ್ಲಿ ಕಳ್ಳತನವನ್ನು ಮಾಡಿದ್ದಾನೆ. ಈತ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಗಳನ್ನೇ ಟಾರ್ಗೆಟ್ ಮಾಡಿದ್ದು, ಮೊದಲು ಉಪ್ಪಿನಂಗಡಿಯಲ್ಲಿ ಕಳವು ಮಾಡಿ ಬಳಿಕ ದ್ವಿ ಚಕ್ರ ವಾಹನದಲ್ಲಿ ನೆಕ್ಕಿಲಾಡಿಯತ್ತ ಸಾಗಿರುವುದು ದೃಢಪಟ್ಟಿದೆ.
ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಅಂಗಡಿ ಮಾಲಕರ ವಿನಂತಿಯ ಮೇರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.